ಅಮೆರಿಕಕ್ಕೆ ಮುಖಭಂಗ; ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ ಎಂದಿದ್ದೇಕೆ ವಿದೇಶಾಂಗ ಸಚಿವ..? Jaishankar

ಅಮೆರಿಕಕ್ಕೆ ಮುಖಭಂಗ; ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ ಎಂದಿದ್ದೇಕೆ ವಿದೇಶಾಂಗ ಸಚಿವ..?
ಅಮೆರಿಕಕ್ಕೆ ಮುಖಭಂಗ; ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ ಎಂದಿದ್ದೇಕೆ ವಿದೇಶಾಂಗ ಸಚಿವ..?
Published on
ನವದೆಹಲಿ: ಭಾರತದ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ರೈಸಿನಾ ಡೈಲಾಗ್ ವೇದಿಕೆಯು ಇಂದು ಜಾಗತಿಕ ರಾಜತಾಂತ್ರಿಕ ಸಂಘರ್ಷಕ್ಕೆ ಸಾಕ್ಷಿಯಾಯಿತು. ಭಾರತವನ್ನು ಚೀನಾದಂತೆ ಪ್ರಬಲ ಸ್ಪರ್ಧಿಯಾಗಿ ಬೆಳೆಯಲು ಬಿಡುವುದಿಲ್ಲ ಎಂಬ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿಯ ವಿವಾದಾತ್ಮಕ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar) ಅತ್ಯಂತ ತೀಕ್ಷ್ಣ ಮತ್ತು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಏಳಿಗೆಯನ್ನು ಬೇರೆ ಯಾರೋ ಅಲ್ಲ, ಸ್ವತಃ ಭಾರತವೇ ನಿರ್ಧರಿಸಲಿದೆ ಎಂದು ಹೇಳುವ ಮೂಲಕ ಜೈಶಂಕರ್ ಅಮೆರಿಕಕ್ಕೆ ಭಾರತದ ಸಾರ್ವಭೌಮತ್ವದ ಪಾಠ ಮಾಡಿದ್ದಾರೆ.

ಏನಿದು ವಿವಾದ? ಅಮೆರಿಕ ಹೇಳಿದ್ದೇನು..?

ರೈಸಿನಾ ಡೈಲಾಗ್‌ನಲ್ಲಿ ಮಾತನಾಡಿದ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ, ಚೀನಾದ ಬೆಳವಣಿಗೆಯನ್ನು ಉಲ್ಲೇಖಿಸುತ್ತಾ ಒಂದು ಆಘಾತಕಾರಿ ಹೇಳಿಕೆ ನೀಡಿದ್ದರು. ಹಿಂದೆ ಚೀನಾದ ವಿಷಯದಲ್ಲಿ ಅಮೆರಿಕ ಮಾಡಿದ ತಪ್ಪುಗಳನ್ನು ನಾವು ಮತ್ತೆ ಮಾಡುವುದಿಲ್ಲ. ಭಾರತವು ಅಮೆರಿಕಕ್ಕೆ ಸವಾಲಾಗುವಂತಹ ಅಥವಾ ಸ್ಪರ್ಧಿಯಾಗುವಂತಹ ಮಟ್ಟಕ್ಕೆ ಬೆಳೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯು ಭಾರತದ ರಾಜತಾಂತ್ರಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಜೈಶಂಕರ್ ಪವರ್‌ಫುಲ್ ತಿರುಗೇಟು

ಅಮೆರಿಕದ ಈ ಅಹಂಕಾರದ ಮಾತಿಗೆ ವೇದಿಕೆಯಲ್ಲೇ ಉತ್ತರಿಸಿದ ಎಸ್. ಜೈಶಂಕರ್, ಭಾರತದ ಇಂದಿನ ಶಕ್ತಿಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು.
ಸ್ವಯಂ ನಿರ್ಧಾರ: ಭಾರತದ ಉನ್ನತಿಯನ್ನು ಭಾರತವೇ ನಿರ್ಧರಿಸುತ್ತದೆ. ನಮ್ಮ ಭವಿಷ್ಯವನ್ನು ಬರೆಯುವ ಶಕ್ತಿ ನಮ್ಮ ದೇಶದ ಜನರಿಗೆ ಮತ್ತು ನಮ್ಮ ಸಾಮರ್ಥ್ಯಕ್ಕೆ ಇದೆಯೇ ಹೊರತು ಬೇರೆ ದೇಶಗಳಿಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಮ್ಮ ಸಾಮರ್ಥ್ಯವೇ ಅಡಿಪಾಯ: ನಮ್ಮ ಬೆಳವಣಿಗೆಯು ನಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿದೆ. ನಾವು ಇತರರ ತಪ್ಪುಗಳಿಂದ ಅಥವಾ ಇತರರು ನೀಡುವ ಅವಕಾಶದಿಂದ ಬೆಳೆಯುತ್ತಿಲ್ಲ. ನಮ್ಮ ಪರಿಶ್ರಮವೇ ನಮ್ಮನ್ನು ಈ ಮಟ್ಟಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಸ್ಪರ್ಧೆಯ ಭಯವಿಲ್ಲ: ಭಾರತವು ಯಾರೊಂದಿಗೂ ಅನಗತ್ಯ ಸ್ಪರ್ಧೆಗೆ ಇಳಿಯುವುದಿಲ್ಲ, ಆದರೆ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಯಾವುದೇ ಶಕ್ತಿಗೆ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಜೈಶಂಕರ್ ರವಾನಿಸಿದ್ದಾರೆ.

ಬದಲಾದ ಜಾಗತಿಕ ಸಮೀಕರಣ: ಭಾರತದ ಪ್ರಾಬಲ್ಯ

ಇರಾನ್-ಇಸ್ರೇಲ್ ಯುದ್ಧ ಮತ್ತು ರಷ್ಯಾ-ಯುಕ್ರೇನ್ ಸಂಘರ್ಷದ ನಡುವೆ ಅಮೆರಿಕವು ಭಾರತವನ್ನು ತನ್ನ ಆಪ್ತ ಮಿತ್ರ ಎಂದು ಕರೆದರೂ, ಒಳಗೊಳಗೆ ಭಾರತದ ಬೆಳೆಯುತ್ತಿರುವ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯ ಬಗ್ಗೆ ಅಮೆರಿಕಕ್ಕೆ ಆತಂಕವಿದೆ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ.
ಚೀನಾ ಇಂದು ಅಮೆರಿಕಕ್ಕೆ ದೊಡ್ಡ ಸವಾಲಾಗಿದೆ. ಅದೇ ರೀತಿ ನಾಳೆ ಭಾರತವೂ ಕೂಡ ಜಾಗತಿಕವಾಗಿ ಅಮೆರಿಕದ ಅಧಿಪತ್ಯಕ್ಕೆ ಸವಾಲು ಹಾಕಬಹುದು ಎಂಬ ಭಯ ವಾಷಿಂಗ್ಟನ್‌ನಲ್ಲಿದೆ. ಆದರೆ ಜೈಶಂಕರ್ ಅವರ ಮಾತುಗಳು, ಭಾರತವು ಯಾರ ಅಡಿಯಾಳೂ ಅಲ್ಲ ಮತ್ತು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

ಅಮೆರಿಕಕ್ಕೆ ಭಾರತ ಏಕೆ ಅನಿವಾರ್ಯ..?

ಒಂದೆಡೆ ಅಮೆರಿಕವು ಭಾರತವನ್ನು ಸ್ಪರ್ಧಿಯಾಗಿ ಬೆಳೆಯಲು ಬಿಡುವುದಿಲ್ಲ ಎನ್ನುತ್ತದೆ. ಇನ್ನೊಂದೆಡೆ ರಷ್ಯಾ ಮತ್ತು ಚೀನಾವನ್ನು ಎದುರಿಸಲು ಭಾರತದ ಸಹಾಯವನ್ನು ಯಾಚಿಸುತ್ತದೆ. 
ಇಂಧನ ಮಾರುಕಟ್ಟೆ: ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅಮೆರಿಕವೇ ವಿನಾಯಿತಿ ನೀಡಿದೆ.
ರಕ್ಷಣಾ ಪಾಲುದಾರಿಕೆ: ಅಮೆರಿಕದ ಶಸ್ತ್ರಾಸ್ತ್ರಗಳಿಗೆ ಭಾರತವೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ.
ಚೀನಾ ನಿಯಂತ್ರಣ: ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾವನ್ನು ತಡೆಯಲು ಅಮೆರಿಕಕ್ಕೆ ಭಾರತದ ಅನಿವಾರ್ಯತೆ ಇದೆ.
ಹೀಗಿದ್ದರೂ, ಅಮೆರಿಕದ ಅಧಿಕಾರಿಯೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡಿರುವುದು ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net