ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ ಬೆನ್ನಲ್ಲೇ ಸುನಾಮಿ ಎಚ್ಚರಿಕೆ! ಪ್ರಾಣ ಭಯದಿಂದ ಸುರಕ್ಷಿತ ಸ್ಥಳಕ್ಕೆ ಓಡಿದ ಜನ | Indonesia

ಸಾಂದರ್ಭಿಕ ಚಿತ್ರ (AI)
ಸಾಂದರ್ಭಿಕ ಚಿತ್ರ (AI)
Published on

ಪ್ರಮುಖ ಮುಖ್ಯಾಂಶಗಳು

  • ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭಾರಿ ಭೂಮಿ ಕಂಪಿಸಿದೆ
  • ಪ್ರಬಲ ಭೂಕಂಪನ ಬೆನ್ನಲ್ಲೇ ಸುನಾಮಿ ಎಚ್ಚರಿಕೆ
  • ಇಬ್ಬರು ಬಲಿಯಾಗಿದ್ದು, ನೂರಾರು ಜನರನ್ನು ತಕ್ಷಣವೇ ಸ್ಥಳಾಂತರಕ್ಕೆ ಅಲರ್ಟ್​
ಜಕಾರ್ತಾ: ಇತ್ತೀಚೆಗಷ್ಟೇ ಉತ್ತರ ಅಮೆರಿಕದ ಕೊಲಂಬಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಸಾವಿರಾರು ಮಂದಿ ದಾರುಣವಾಗಿ ಸಾವನ್ನಪ್ಪಿದರು. ಈ ದುರಂತ ಮರೆಯುವ ಮುನ್ನವೇ ಇದೀಗ ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭಾರಿ ಭೂಕಂಪ ಉಂಟಾಗಿದ್ದು, ಇಬ್ಬರು ಬಲಿಯಾಗಿದ್ದಾರೆ.
ಇಂಡೋನೇಷ್ಯಾದ ಕರಾವಳಿ ಭಾಗದಲ್ಲಿ ಪ್ರಬಲವಾಗಿ ಭೂಮಿ ಕಂಪಿಸಿದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪನದ ತೀವ್ರತೆಗೆ ಕಟ್ಟಡಗಳು ಬಿರುಕು ಬಿಟ್ಟಿದ್ದು, ಸಾವಿರಾರು ಮಂದಿ ಪ್ರಾಣ ಭಯದಿಂದ ದಿಕ್ಕಾಪಾಲಾಗಿ ಓಡಿ, ಬೆಟ್ಟದ ಪ್ರದೇಶ ಸೇರಿ ಸುರಕ್ಷಿತ ಸ್ಥಳಗಳನ್ನು ಹುಡುಕಿ ಓಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ಪ್ರಕಾರ, ಫ್ಲೋರೆಸ್ ದ್ವೀಪದ ಎಂಡೆ ನಗರದಿಂದ ವಾಯುವ್ಯಕ್ಕೆ ಸುಮಾರು 68 ಕಿ.ಮೀ. ದೂರದ ಸಮುದ್ರದ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಪ್ರಮುಖ ಕಂಪನದ ಬೆನ್ನಲ್ಲೇ ಅದೇ ಪ್ರದೇಶದಲ್ಲಿ 6.1 ತೀವ್ರತೆಯ ಪ್ರಬಲ ತರುವಾಯದ ಕಂಪನ ಸೇರಿ ಹಲವೆಡೆ ಭೂಮಿ ಜೋರಾಗಿ ಕಂಪಿಸಿದೆ.

ಸುನಾಮಿ ಆತಂಕ!

ಇಂಡೋನೇಷ್ಯಾದ ಹವಾಮಾನ ಇಲಾಖೆ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG) ಈ ಕಂಪನದಿಂದ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಈಗಾಗಲೇ ಹೈಅಲರ್ಟ್​ ನೀಡಿದೆ. ಪೂರ್ವ ನುಸಾ ತೆಂಗಾರಾ, ದಕ್ಷಿಣ ಸುಲಾವೆಸಿ ಹಾಗೂ ಪಶ್ಚಿಮ ನುಸಾ ತೆಂಗಾರಾ ಪ್ರಾಂತ್ಯಗಳಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಸಂಸ್ಥೆಯ ನಿರ್ದೇಶಕರಾದ ವಿಜಯಾಂಟೋ ಮುನ್ನೆಚ್ಚರಿಕೆ ನೀಡಿದ್ದಾರೆ.
ಸಮುದ್ರದಲ್ಲಿ 0.5 ಮೀಟರ್‌ನಿಂದ 3 ಮೀಟರ್‌ವರೆಗೆ (1.6ರಿಂದ 9.8 ಅಡಿ) ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಫ್ಲೋರೆಸ್ ದ್ವೀಪದ ಮೌಮೆರೆ ನಗರದಲ್ಲಿ ಸಮುದ್ರದ ನೀರು ಹಿಂದೆ ಸರಿಯುತ್ತಿರುವುದು ಕಂಡುಬಂದಿದ್ದು, ಇದು ಸುನಾಮಿಗೂ ಮುನ್ನ ಉಂಟಾಗುವ ಲಕ್ಷಣವಾದ ಹಿನ್ನಲೆ ಜನರು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದು ಮತ್ತು ಸುರಕ್ಷಿತ ಸ್ಥಳಗಳಿಗೆ ಹೋಗುವುದು ಒಳಿತು ಎಂದು ತಿಳಿಸಲಾಗಿದೆ.

ಇಂಡೋನೇಷ್ಯಾದ ಕಹಿ ಇತಿಹಾಸ

ಈ ದೇಶವು ಪೆಸಿಫಿಕ್ 'ರಿಂಗ್ ಆಫ್ ಫೈಯರ್' ವಲಯದಲ್ಲಿದ್ದು, ಇಲ್ಲಿ ಪದೇ ಪದೇ ಭೀಕರ ಭೂಕಂಪ ಹಾಗೂ ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಿರುತ್ತವೆ ಎಂಬುದು ಕಹಿ ಸತ್ಯ. ಇದೇ 2004ರಲ್ಲಿ ಸುಮಾತ್ರಾ ಕರಾವಳಿಯಲ್ಲಿ ಸಂಭವಿಸಿದ 9.1 ತೀವ್ರತೆಯ ಮಹಾ ಭೂಕಂಪದ ಬೆನ್ನಲ್ಲೇ ಸುನಾಮಿ ಉಂಟಾಗಿ, ಕೇವಲ ಇಂಡೋನೇಷ್ಯಾವೊಂದರಲ್ಲೇ ಒಟ್ಟು 2 ಲಕ್ಷದ 20 ಸಾವಿರಕ್ಕೂ ಅಧಿಕ ಜನರು ಬಲಿಯಾದರು ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net