ಸ್ಯಾನ್ ಫ್ರಾನ್ಸಿಸ್ಕೋ: ಹಾಲಿವುಡ್ನ ಟರ್ಮಿನೇಟರ್ ಸಿನಿಮಾದಲ್ಲಿ ನಮಗೆ ಕಾಣಸಿಗುವ ಮನುಷ್ಯ ಮತ್ತು ರೋಬೋ ನಡುವಿನ ಗುದ್ದಾಟದ ದೃಶ್ಯಗಳು ನಿಜಕ್ಕೂ ಮೈ ರೋಮಾಂಚನಗೊಳಿಸುತ್ತದೆ. ಕೆಲವರಿಗಂತು ಸಖತ್ ಥ್ರಿಲ್ ಎನ್ನಿಸುತ್ತೆ. ಆದರೆ, ನಿಜ ಜೀವನದಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಅಮೆರಿಕದ ವ್ಯಕ್ತಿಯೊಬ್ಬರು ರಿಯಲ್ ರೋಬೋ ಜತೆ ಸೆಣಸಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿರುವ ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮೆರಿಕ ಮೂಲದ ಪ್ರಸಿದ್ಧ ರೊಬೊಟಿಕ್ಸ್ ಸಂಸ್ಥೆ 'REK' ಆಯೋಜಿಸಿದ್ದ ಈ ಕಾದಾಟದಲ್ಲಿ, 6 ಅಡಿ ಎತ್ತರದ ಹ್ಯೂಮನಾಯ್ಡ್ (Humanoid Robot) ರೋಬೋಟ್ ಒಂದರ ವಿರುದ್ಧ ಜನಪ್ರಿಯ ಯುಎಸ್ ಮೂಲದ ಕಂಟೆಂಟ್ ಕ್ರಿಯೇಟರ್ ಫ್ರಾಂಕಿ ಲಾಪೆನ್ನಾ ಅವರು ನೇರವಾಗಿ ಕುಸ್ತಿ ಅಖಾಡದಲ್ಲೇ ಗುದ್ದಾಡಿದ್ದಾರೆ.
REK ಸಂಸ್ಥೆಯು ವರ್ಚುವಲ್ ರಿಯಾಲಿಟಿ (VR) ಮೂಲಕ ರೋಬೋಟ್‌ಗಳನ್ನು ದೂರದಿಂದಲೇ ಕಂಟ್ರೋಲ್ ಮಾಡಿ ಪಂದ್ಯಗಳನ್ನು ಆಡುವ ಹೊಸ ತಂತ್ರಜ್ಞಾನದ ಟ್ರಯಲ್ನಡಿ ಈ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಪಂದ್ಯ ಆರಂಭವಾಗುತ್ತಿದ್ದಂತೆ ಫ್ರಾಂಕಿ ಲಾಪೆನ್ನಾ ರೋಬೋಟ್‌ಗೆ ಸರಣಿ ಪಂಚ್‌ಗಳನ್ನು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ಆ ರೋಬೋಟ್ ಅತ್ಯಂತ ಶಕ್ತಿಯುತವಾಗಿ ಪಂಚ್ ಹಾಗೂ ಕಿಕ್‌ಗಳನ್ನು ನೀಡಿತು. ರೋಬೋಟ್ ನೀಡಿದ ಬಲವಾದ ಕಿಕ್‌ಗೆ ಲಾಪೆನ್ನಾ ರಿಂಗ್‌ನ ಮೂಲೆಗೆ ಬಿದ್ದ ದೃಶ್ಯವಂತು ಹಲವರ ಹುಬ್ಬೇರಿಸಿದೆ,(ಏಜೆನ್ಸೀಸ್).