_1785607137488.webp?w=480&auto=format%2Ccompress&fit=max)
_1785607137488.webp?w=480&auto=format%2Ccompress&fit=max)
ಕೆಂಪು ಸಮುದ್ರದಲ್ಲಿ (ರೆಡ್ ಸೀ) ಸಾಗುವ ವಾಣಿಜ್ಯ ಹಡಗುಗಳ ಭದ್ರತೆಗಾಗಿ ಅಂತಾರಾಷ್ಟ್ರೀಯ ಒಕ್ಕೂಟವೊಂದನ್ನು ರಚಿಸುವುದಾಗಿ ಸೌದಿ ಅರೇಬಿಯಾ ಘೊಷಿಸಿದೆ. ಯೆಮನ್ನ ಹೌತಿ ಬಂಡುಕೋರರ ಸರಣಿ ದಾಳಿಗಳಿಂದ ಹಡಗುಗಳನ್ನು ರಕ್ಷಿಸುವುದು ಈ ಪಡೆಯ ಪ್ರಮುಖ ಉದ್ದೇಶವಾಗಿದೆ. ಈ ಒಕ್ಕೂಟದ ಭಾಗವಾಗಲು 50ಕ್ಕೂ ಹೆಚ್ಚು ದೇಶಗಳಿಗೆ ಆಹ್ವಾನ ಕಳುಹಿಸಲಾಗಿದೆ. ಜುಲೈ 20ರಂದು ಹೌತಿ ಬಂಡುಕೋರರು ಸೌದಿ ಅರೇಬಿಯಾ ವಿರುದ್ಧ ಸಮುದ್ರ ದಿಗ್ಬಂಧನವನ್ನು ಘೊಷಿಸಿದ್ದರು. ಸೌದಿ ಬಂದರುಗಳನ್ನು ಬಳಸುವ ಯಾವುದೇ ಹಡಗುಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದರು. ಗಸ್ತು ತಿರುಗಲು ಮತ್ತು ವಾಣಿಜ್ಯ ಹಡಗುಗಳಿಗೆ ಭದ್ರತೆ ಒದಗಿಸಲು ಒಕ್ಕೂಟದ ಸದಸ್ಯ ರಾಷ್ಟ್ರಗಳು ಕೆಂಪು ಸಮುದ್ರ ಹಾಗೂ ಬಾಬ್ ಅಲ್-ಮಂದೇಬ್ ಜಲಸಂಧಿಯಲ್ಲಿ ತಮ್ಮ ನೌಕಾಪಡೆಯ ಯುದ್ಧನೌಕೆಗಳನ್ನು ನಿಯೋಜಿಸಲಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಅಮೆರಿಕ ಮತ್ತು ಇರಾನ್ ನಡುವೆ ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಲೇ, ಇರಾನ್ನ ಮಿತ್ರಪಡೆಯಾದ ಹೌತಿ ಬಂಡುಕೋರರು ಸಹ ಈ ಸಂಘರ್ಷಕ್ಕೆ ಧುಮುಕಬಹುದು ಎಂದು ಅಂದಾಜಿಸಲಾಗಿತ್ತು. ಸುಮಾರು ಐದು ತಿಂಗಳ ನಂತರ ಅಂದರೆ ಜುಲೈ ತಿಂಗಳ ಅಂತ್ಯದಲ್ಲಿ ಅದೇ ಆತಂಕ ಈಗ ನಿಜವಾಗಿದೆ. ಕಳೆದ ಒಂದು ವಾರದಲ್ಲಿ ಹೌತಿಗಳು ಸೌದಿ ಅರೇಬಿಯಾ ಹಾಗೂ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ಗಳ ಮೂಲಕ ಸಾಲು ಸಾಲು ದಾಳಿಗಳನ್ನು ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವೂ ಹೌತಿಗಳ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದೆ. ಅಂದರೆ, ನಾಲ್ಕು ವರ್ಷಗಳಿಂದ ಹೇಗೋ ಶಮನಗೊಂಡಿದ್ದ ಯೆಮನ್ ಯುದ್ಧವು ಮತ್ತೆ ಉಲ್ಬಣಗೊಳ್ಳುವ ಅಂಚಿನಲ್ಲಿದೆ. ಹೌತಿಗಳು ಸೌದಿ ಅರೇಬಿಯಾದ ವಿರುದ್ಧ ಸಮುದ್ರ ದಿಗ್ಬಂಧನವನ್ನು ಘೊಷಿಸಿದ್ದು, ಎರಡೂ ಕಡೆಯಿಂದ ದಾಳಿಗಳು ನಿರಂತರವಾಗಿ ಹೆಚ್ಚುತ್ತಿವೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಹೊಸ ಯುದ್ಧವೊಂದು ಪ್ರಾರಂಭವಾಗುವ ಅಪಾಯ ದಟ್ಟವಾಗಿದೆ. ಅಲ್ಲದೆ, ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡುಗಗಳನ್ನು ಹೌತಿ ಬಂಡುಕೋರರಿಂದ ರಕ್ಷಿಸಲು ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ಒಕ್ಕೂಟವನ್ನು ರಚಿಸುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು 50 ರಾಷ್ಟ್ರಗಳಿಗೆ ಆಹ್ವಾನ ನೀಡಿದೆ.
ಅಂತಾರಾಷ್ಟ್ರೀಯ ಒಕ್ಕೂಟದ ಭಾಗವಾಗಲು ಅಮೆರಿಕ, ಪಾಕಿಸ್ತಾನ, ಈಜಿಪ್ತ್, ಟರ್ಕಿ, ಜಿಬೌಟಿ, ಸೊಮಾಲಿಯಾ, ಸುಡಾನ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿದೆ. ಈಜಿಪ್ತ್, ಜಿಬೌಟಿ ಮತ್ತು ಸುಡಾನ್ ದೇಶಗಳು ಈ ಒಕ್ಕೂಟಕ್ಕೆ ಸೇರಲು ಈಗಾಗಲೇ ಸಮ್ಮತಿಸಿವೆ. ಅಮೆರಿಕ ತನ್ನ ಭಾಗವಹಿಸು ವಿಕೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸದಿದ್ದರೂ, ಒಕ್ಕೂಟವನ್ನು ಸೇರುವ ಸಾಧ್ಯತೆ ಹೆಚ್ಚಾಗಿದೆ.
1. ಯುದ್ಧನೌಕೆಗಳ ನಿಯೋಜನೆ
ತಜ್ಞರ ಪ್ರಕಾರ, ಒಕ್ಕೂಟದಲ್ಲಿರುವ ದೇಶಗಳು ಕೆಂಪು ಸಮುದ್ರ ಮತ್ತು ಬಾಬ್ ಅಲ್-ಮಂದೇಬ್ ಜಲಸಂಧಿಯಲ್ಲಿ ತಮ್ಮ ನೌಕಾಪಡೆಯ ಯುದ್ಧನೌಕೆಗಳನ್ನು ನಿಯೋಜಿಸಲಿವೆ. ಈ ಹಡಗುಗಳು ಸುತ್ತಮುತ್ತ ಗಸ್ತು ತಿರುಗಲಿದ್ದು, ವಾಣಿಜ್ಯ ಹಡಗುಗಳಿಗೆ ರಕ್ಷಣೆ ನೀಡಲಿವೆ.
2. ಹಡಗುಗಳ ಕಾನ್ವಾಯ್
ತೈಲ ಟ್ಯಾಂಕರ್ ಮತ್ತು ಸರಕು ಸಾಗಣೆ ಹಡಗುಗಳನ್ನು ಒಂಟಿಯಾಗಿ ಕಳುಹಿಸುವ ಬದಲು ಗುಂಪಾಗಿ (ಕಾನ್ವಾಯ್) ಕಳುಹಿಸಲಾಗುತ್ತದೆ. ಅವುಗಳ ಜೊತೆಗೆ ಯುದ್ಧನೌಕೆಗಳು ಚಲಿಸಲಿದ್ದು, ಒಂದು ವೇಳೆ ದಾಳಿ ನಡೆದಲ್ಲಿ ತಕ್ಷಣವೇ ಪ್ರತ್ಯುತ್ತರ ನೀಡಲು ಸಾಧ್ಯವಾಗುತ್ತದೆ.
3. ಡ್ರೋನ್ ಮತ್ತು ಕ್ಷಿಪಣಿ ತಡೆಯುವ ಯತ್ನ
ಹೌತಿಗಳು ಹೆಚ್ಚಾಗಿ ಡ್ರೋನ್, ಕ್ಷಿಪಣಿ ಮತ್ತು ಸ್ಪೋಟಕ ತುಂಬಿದ ದೋಣಿಗಳ ಮೂಲಕ ದಾಳಿ ಮಾಡುತ್ತಾರೆ. ಯುದ್ಧನೌಕೆಗಳಲ್ಲಿರುವ ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ರಾಡಾರ್ಗಳು ಈ ದಾಳಿಗಳನ್ನು ಮೊದಲೇ ಪತ್ತೆಹಚ್ಚಿ ಅವುಗಳನ್ನು ಹೊಡೆದುರುಳಿಸಲು ಯತ್ನಿಸುತ್ತವೆ.
4. ವೈಮಾನಿಕ ಕಣ್ಗಾವಲು ಹೆಚ್ಚಳ
ಸಮುದ್ರದ ಮೇಲೆ ಡ್ರೋನ್ಗಳು, ಗಸ್ತು ವಿಮಾನಗಳು ಮತ್ತು ಕಣ್ಗಾವಲು ವಿಮಾನಗಳು ನಿರಂತರವಾಗಿ ಹಾರಾಟ ನಡೆಸಲಿವೆ. ಇದರಿಂದ ಹೌತಿಗಳ ಲಾಂಚಿಂಗ್ ಪಾಯಿಂಟ್ಗಳು ಮತ್ತು ಶಂಕಿತ ಚಟುವಟಿಕೆಗಳನ್ನು ಬೇಗನೆ ಪತ್ತೆಹಚ್ಚಿ, ಅವುಗಳನ್ನು ನಿಷ್ಕ್ರಿಯಗೊಳಿಸಬಹುದು.
5. ಗುಪ್ತಚರ ಮಾಹಿತಿ ಹಂಚಿಕೆ
ಒಕ್ಕೂಟದಲ್ಲಿರುವ ದೇಶಗಳು ರಾಡಾರ್, ಉಪಗ್ರಹ ಮತ್ತು ಗುಪ್ತಚರ ಸಂಸ್ಥೆಗಳಿಂದ ಸಿಕ್ಕ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲಿವೆ. ಇದರಿಂದ ಅಪಾಯದ ಮುನ್ಸೂಚನೆಯನ್ನು ಮೊದಲೇ ಪಡೆಯಲು ಸಾಧ್ಯವಾಗುತ್ತದೆ.
ಕೆಂಪು ಸಮುದ್ರವು ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಇದರ ಒಂದು ಬದಿಯಲ್ಲಿ ಸೌದಿ ಅರೇಬಿಯಾ ಮತ್ತು ಯೆಮನ್ ಇದ್ದರೆ, ಇನ್ನೊಂದು ಬದಿಯಲ್ಲಿ ಈಜಿಪ್ತ್, ಸುಡಾನ್, ಎರಿಟ್ರಿಯಾ, ಜಿಬೂಟಿ ಮತ್ತು ಸೊಮಾಲಿಯಾಗಳಿವೆ. ಜಾಗತಿಕ ಸಮುದ್ರ ವ್ಯಾಪಾರದ 30%ರಷ್ಟು ಸರಕು ಸಾಗಣೆ ಇದೇ ಮಾರ್ಗದ ಮೂಲಕ ನಡೆಯುತ್ತದೆ.
ಕೆಂಪು ಸಮುದ್ರವನ್ನು ಪ್ರವೇಶಿಸಲು ಮತ್ತು ಹೊರಹೋಗಲು ಕೇವಲ ಎರಡೇ ಮಾರ್ಗಗಳಿವೆ. ಪೂರ್ವದಲ್ಲಿ ಬಾಬ್ ಅಲ್-ಮಂದೇಬ್ ಜಲಸಂಧಿ. ಪಶ್ಚಿಮದಲ್ಲಿ ಸೂಯೆಜ್ ಕಾಲುವೆ. ಆದ್ದರಿಂದ, ಈ ಎರಡು ಮಾರ್ಗಗಳಲ್ಲಿ ಯಾವುದಾದರೂ ಒಂದರಲ್ಲಿ ಅಡಚಣೆ ಉಂಟಾದರೂ ಜಾಗತಿಕ ವ್ಯಾಪಾರ ಮತ್ತು ತೈಲ ಪೂರೈಕೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಬಾಬ್ ಅಲ್-ಮಂದೇಬ್ ತನ್ನ ಕಿರಿದಾದ ಭಾಗದಲ್ಲಿ 29 ಕಿಲೋಮೀಟರ್ ಅಗಲವಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಹಡಗುಗಳ ಸಂಚಾರಕ್ಕಾಗಿ ಎರಡು ಸಮುದ್ರ ಪಥಗಳು ಮಾತ್ರ ಇವೆ.
ಇರಾನ್ ಯುದ್ಧದ ನಂತರ ಹೊಮುಜ್ ಜಲಸಂಧಿಯಲ್ಲಾದ ದಿಗ್ಬಂಧನದ ಕಾರಣದಿಂದಾಗಿ, ಸೌದಿ ಅರೇಬಿಯಾ ತನ್ನ ಹೆಚ್ಚಿನ ತೈಲವನ್ನು ಕೆಂಪು ಸಮುದ್ರ ಮಾರ್ಗದ ಮೂಲಕ ಕಳುಹಿಸುತ್ತಿದೆ. ಆದರೆ ಈಗ ಈ ಮಾರ್ಗದಲ್ಲೂ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಪ್ರಭಾವ ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ ಜಗತ್ತಿನ ಸುಮಾರು 20% ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯು ಹೊಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಆದರೆ ಈಗ ಹೊಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರ ಎರಡೂ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ, ಜಗತ್ತಿನ 25% ಇಂಧನ ಪೂರೈಕೆಯು ಯಾವುದೋ ಒಂದು ರೂಪದಲ್ಲಿ ಈ ಸಂಘರ್ಷದಿಂದ ಪ್ರಭಾವಿತಗೊಳ್ಳುತ್ತಿದೆ.
ಸೌದಿ ಅರೇಬಿಯಾದ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಇತ್ತೀಚೆಗೆ (ಜುಲೈ 29) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಯೆಮನ್ನ ಹೌತಿ ಬಂಡುಕೋರರನ್ನು ಎದುರಿಸಲು ಸೌದಿ ಅರೇಬಿಯಾ ಸಮರ್ಥವಾಗಿದೆ ಮತ್ತು ಪ್ರಸ್ತುತ ಈ ವಿಷಯದಲ್ಲಿ ಅಮೆರಿಕದ ಮಿಲಿಟರಿ ನೆರವಿನ ಅಗತ್ಯವಿಲ್ಲ ಎಂದು ಖಾಲಿದ್ ಅವರು ಜೆ.ಡಿ.ವ್ಯಾನ್ಸ್ ಅವರಿಗೆ ತಿಳಿಸಿದ್ದಾರೆ. ಸೌದಿ ಅರೇಬಿಯಾವು ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಪರವಾಗಿಲ್ಲ ಎಂಬುದನ್ನು ಖಾಲಿದ್ ಅಮೆರಿಕಕ್ಕೆ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಅಗತ್ಯ ಬಿದ್ದಾಗ ತನ್ನನ್ನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದಿದ್ದಾರೆ. ಫೆಬ್ರವರಿ 28ರಿಂದ ಅಮೆರಿಕವು ಇರಾನ್ ಮೇಲೆ ದಾಳಿಗಳನ್ನು ಪ್ರಾರಂಭಿಸಿದ ನಂತರ, ಇರಾನ್ ಪ್ರತೀಕಾರದ ಭಾಗವಾಗಿ ಗಲ್ಪ್ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸುತ್ತಿದೆ.
ಯೆಮನ್ನ ಹೌತಿ ಬಂಡುಕೋರರು ಕೆಂಪು ಸಮುದ್ರದ ದಕ್ಷಿಣ ಭಾಗದ ಮೂಲಕ ಸಾಗುವ ವಾಣಿಜ್ಯ ಮತ್ತು ಸರಕು ಹಡಗುಗಳ ಮೇಲೆ ತೆರಿಗೆ ವಿಧಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಆದಾಗ್ಯೂ, ಈ ತೆರಿಗೆ ನಿಯಮ ಯಾವಾಗ ಜಾರಿಗೆ ಬರಲಿದೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಜುಲೈನಲ್ಲಿ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೌತಿ ನಾಯಕರು ಇರಾನ್ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಇರಾನ್ ಅಧಿಕಾರಿಗಳು ಹಡಗುಗಳ ಮೇಲೆ ತೆರಿಗೆ ವಿಧಿಸುವ ಈ ಕಲ್ಪನೆಯನ್ನು ಹೌತಿ ನಾಯಕರಿಗೆ ನೀಡಿದ್ದರು ಎನ್ನಲಾಗಿದೆ. ತದನಂತರ, ಇರಾನ್ನ ಸಲಹೆಗಾರರು ಹೌತಿ ಅಧಿಕಾರಿಗಳೊಂದಿಗೆ ಕೈಜೋಡಿಸಿ ತೆರಿಗೆ ವಸೂಲಿ ಮಾಡಲು ಅಗತ್ಯವಿರುವ ಸಂಭವನೀಯ ವ್ಯವಸ್ಥೆಯನ್ನು ಸಿದ್ಧಪಡಿಸಲು ನೆರವಾಗಿದ್ದಾರೆ. ಈ ಪ್ರಸ್ತಾವನೆಯಡಿ ಚೀನಾದ ಹಡಗುಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ. ಪ್ರಸ್ತುತ ಚೀನಾ ಸೌದಿ ಅರೇಬಿಯಾದಿಂದ ಅತ್ಯಂತ ಹೆಚ್ಚು ತೈಲವನ್ನು ಖರೀದಿಸುವ ದೇಶವಾಗಿದೆ.
ಹಾದಿ ಅವರು ಅಧ್ಯಕ್ಷ ಹುದ್ದೆ ತೊರೆದ ನಂತರ ಯೆಮನ್ ಮೇಲೆ ಯಾವುದೇ ಒಂದು ನಿರ್ದಿಷ್ಟ ಸರ್ಕಾರದ ನಿಯಂತ್ರಣ ಇರಲಿಲ್ಲ. ಹೌತಿಗಳಿಗೆ ಇರಾನ್ ಬೆಂಬಲ ನೀಡುತ್ತಿದ್ದರಿಂದ, ಇದು ನೆರೆಯ ಸೌದಿ ಅರೇಬಿಯಾಕ್ಕೆ ಭದ್ರತಾ ಆತಂಕವನ್ನು ಸೃಷ್ಟಿಸಿತು. ಹೀಗಾಗಿ 2015ರಲ್ಲಿ ಸೌದಿ ಅರೇಬಿಯಾವು ಎಂಟು ಅರಬ್ ದೇಶಗಳೊಂದಿಗೆ ಸೇರಿ ಮಿಲಿಟರಿ ಒಕ್ಕೂಟವನ್ನು ರಚಿಸಿತು ಮತ್ತು ಹೌತಿಗಳ ವಿರುದ್ಧ ಯುದ್ಧವನ್ನು ಪ್ರಾರಂಭಿಸಿತು. ಸುಮಾರು ಎಂಟು ವರ್ಷಗಳ ಕಾಲ ನಡೆದ ಯುದ್ಧದ ನಂತರ, ಕೇವಲ ಸೈನ್ಯ ಬಲದಿಂದ ಹೌತಿಗಳನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಸೌದಿ ಅರೇಬಿಯಾಗೆ ಅರಿವಾಯಿತು. ತದನಂತರ, ಅದು ಮಾತುಕತೆಯ ಮಾರ್ಗವನ್ನು ಆಯ್ದುಕೊಂಡು ನೇರವಾಗಿ ಹೌತಿ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಪ್ರಾರಂಭಿಸಿತು. ಇಂದು ಉತ್ತರ ಯೆಮನ್ನ ಬಹುದೊಡ್ಡ ಭಾಗವು ಹೌತಿಗಳ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ದಕ್ಷಿಣ ಯೆಮನ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರದ ನಿಯಂತ್ರಣದಲ್ಲಿದ್ದರೂ, ಅದು ಆರ್ಥಿಕ ಮತ್ತು ಮಿಲಿಟರಿ ನೆರವಿಗಾಗಿ ಸೌದಿ ಅರೇಬಿಯಾವನ್ನೇ ಹೆಚ್ಚಾಗಿ ಅವಲಂಬಿಸಿದೆ.