ತಾಲಿಬಾನ್ ಆಡಳಿತಕ್ಕೆ 5 ವರ್ಷ!

Taliban | ತಾಲಿಬಾನ್ ಆಡಳಿತಕ್ಕೆ 5 ವರ್ಷ!
Taliban | ತಾಲಿಬಾನ್ ಆಡಳಿತಕ್ಕೆ 5 ವರ್ಷ!
Published on

ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆದು ಐದು ವರ್ಷಗಳು ಕಳೆದಿದ್ದರೂ, ತಾಲಿಬಾನ್ ಆಡಳಿತ ಇನ್ನೂ ಮುಂದುವರಿದಿದೆ. ದೇಶದಲ್ಲಿ ಹಿಂದಿನ ದಿನಗಳಿಗೆ ಹೋಲಿಸಿದರೆ ಶಾಂತಿ ನೆಲೆಸಿದೆಯಾದರೂ, ಇದು ಕಠಿಣ ಮತ್ತು ದಮನಕಾರಿ ವ್ಯವಸ್ಥೆಯಾಗಿದೆ. ಮಹಿಳೆಯರು ಕೆಲಸ ಮಾಡುವುದು, ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯುವುದು ಮತ್ತು ಪುರುಷ ಪೋಷಕರಿಲ್ಲದೆ ಪ್ರಯಾಣಿಸುವುದರ ಮೇಲೆ ನಿಷೇಧ ಹೇರಲಾಗಿದೆ. ಹೆಣ್ಣುಮಕ್ಕಳ ಪ್ರೌಢ ಶಿಕ್ಷಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಸಂಗೀತಕ್ಕೂ ನಿರ್ಬಂಧ ವಿಧಿಸಲಾಗಿದೆ. ಅಮೆರಿಕ ಮತ್ತು ಯುರೋಪ್ ಒಕ್ಕೂಟಗಳು ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಲು ನಿರಾಕರಿಸಿ ಹಲವು ನಿರ್ಬಂಧಗಳನ್ನು ವಿಧಿಸಿವೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ತಾಲಿಬಾನ್ ಅಧಿಕಾರದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರುತ್ತಿಲ್ಲ. ಮತ್ತೊಂದೆಡೆ, 2022ರ ನಂತರ ದೇಶಕ್ಕೆ ದೊರೆಯುತ್ತಿದ್ದ ಮಾನವೀಯ ನೆರವಿನಲ್ಲಿ ಶೇಕಡ 70ರಷ್ಟು ಕಡಿತವಾಗಿದ್ದು, ದೇಶದ ಅರ್ಧದಷ್ಟು ಜನಸಂಖ್ಯೆ ಈಗಲೂ ತುರ್ತು ನೆರವಿನ ಅಗತ್ಯದಲ್ಲಿದೆ. 5 ವರ್ಷ ಕಳೆದರೂ, ಅಫ್ಘಾನಿಸ್ತಾನ ಮಾತ್ರ ಉತ್ತಮ ನಾಯಕತ್ವದ ನಿರೀಕ್ಷೆಯಲ್ಲಿದೆ.

ಕಾಬೂಲ್ ಅನ್ನು 2021ರ ಆಗಸ್ಟ್ 15ರಂದು ವಶಪಡಿಸಿಕೊಂಡ ನಂತರ, ತಾಲಿಬಾನ್ ಆಡಳಿತವು ಅಫ್ಘಾನಿಸ್ತಾನದಲ್ಲಿ ಐದು ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ದೇಶವು ಭದ್ರತೆಯ ದೃಷ್ಟಿಯಿಂದ ದಶಕಗಳ ಯುದ್ಧದಿಂದ ಮುಕ್ತಿ ಪಡೆದಿದ್ದರೂ, ನಾಗರಿಕ ಹಕ್ಕುಗಳು, ಆರ್ಥಿಕತೆ ಮತ್ತು ಮಹಿಳೆಯರ ಸ್ವಾತಂತ್ರ್ಯದ ವಿಷಯದಲ್ಲಿ ಗಂಭೀರ ಹಿನ್ನಡೆಯನ್ನು ಅನುಭವಿಸಿದೆ. ಮಾಧ್ಯಮಗಳ ಮೇಲೆ ಕಠಿಣ ಸೆನ್ಸಾರ್‌ಶಿಪ್ ವಿಧಿಸಲ್ಪಟ್ಟಿದ್ದು, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಇಸ್ಲಾಮಿಕ್ ಷರಿಯಾ ಕಾನೂನಿನ ಕಠಿಣ ವ್ಯಾಖ್ಯಾನವನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕ ಶಿಕ್ಷೆಗಳು ಮತ್ತು ಕಠಿಣ ನಿರ್ಬಂಧಗಳು ದೈನಂದಿನ ಜೀವನದ ಭಾಗವಾಗಿವೆ. ತಾಲಿಬಾನ್ ದೇಶದ ಆಡಳಿತವನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದರೂ, ಜನಸಾಮಾನ್ಯರಿಗೆ ಮೂಲಭೂತ ಹಕ್ಕುಗಳು, ಆರ್ಥಿಕ ಸ್ಥಿರತೆ ಮತ್ತು ಗೌರವಯುತ ಜೀವನವನ್ನು ಒದಗಿಸುವಲ್ಲಿ ವಿಫಲವಾಗಿದೆ.

ಮಹಿಳೆಯರ ಬದುಕು ದುಸ್ತರ

ಆರನೇ ತರಗತಿಯ ನಂತರ ಹೆಣ್ಣುಮಕ್ಕಳ ಪ್ರೌಢ ಶಿಕ್ಷಣ, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ತಾಲಿಬಾನ್ ಸಂಪೂರ್ಣವಾಗಿ ರದ್ದುಗೊಳಿಸಿದೆ. ಹೆಣ್ಣುಮಕ್ಕಳ ಶಿಕ್ಷಣವನ್ನು ಜಾಗತಿಕವಾಗಿ ನಿಷೇಧಿಸಿರುವ ಏಕೈಕ ದೇಶ ಅಫ್ಘಾನಿಸ್ತಾನವಾಗಿದೆ! ಅಷ್ಟೇ ಅಲ್ಲ, ಮಹಿಳೆಯರು ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಹಾಗೂ ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಬ್ಯೂಟಿ ಪಾರ್ಲರ್‌ಗಳನ್ನು ಬಲವಂತದಿಂದ ಮುಚ್ಚಲಾಗಿದ್ದು, ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಪುರುಷ ಪೋಷಕರು (ಮಹ್ರಮ್) ಇಲ್ಲದೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ. ಪಾರ್ಕ್‌ಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳುವುದು ಕಡ್ಡಾಯ ಮತ್ತು ಧ್ವನಿ ಎತ್ತರಕ್ಕೆ ಕೇಳಿಸದಂತೆ ನಿಯಂತ್ರಣ ಹೇರಲಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟು

ಈ ಹಿಂದೆ ದೇಶದ ಬಜೆಟ್‌ನ ಬಹುಪಾಲು ಭಾಗ ವಿದೇಶಿ ನೆರವಿನಿಂದಲೇ ಬರುತ್ತಿತ್ತು. ತಾಲಿಬಾನ್ ಆಡಳಿತ ಬಂದ ನಂತರ ಅಂತಾರಾಷ್ಟ್ರೀಯ ನೆರವು ಶೇ.70ಕ್ಕಿಂತ ಹೆಚ್ಚು ಕಡಿತಗೊಂಡಿದೆ. ವಿದೇಶಗಳಲ್ಲಿದ್ದ ಅಫ್ಘಾನ್ ಸೆಂಟ್ರಲ್ ಬ್ಯಾಂಕ್‌ನ 9 ಬಿಲಿಯನ್ ಡಾಲರ್‌ಗೂ ಅಧಿಕ ಆಸ್ತಿಯನ್ನು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಮುಟ್ಟುಗೋಲು ಹಾಕಿಕೊಂಡಿವೆ. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ತೀವ್ರ ಬಡತನ ಮತ್ತು ಆಹಾರದ ಕೊರತೆ ಎದುರಿಸುತ್ತಿದ್ದು, ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಅಂತರ ಕಾಯ್ದುಕೊಂಡ ಪಾಶ್ಚಿಮಾತ್ಯ ರಾಷ್ಟ್ರಗಳು

ಪಾಶ್ಚಿಮಾತ್ಯ ರಾಷ್ಟ್ರಗಳು ಅಫ್ಘಾನಿಸ್ತಾನದಿಂದ ದೂರ ಉಳಿದಿರುವುದರ ಲಾಭವನ್ನು ರಷ್ಯಾ, ಚೀನಾ, ಟರ್ಕಿ ಮತ್ತು ಯುಎಇ ರಾಷ್ಟ್ರಗಳು ಪಡೆದುಕೊಳ್ಳುತ್ತಿವೆ. ರಷ್ಯಾ ಈಗಾಗಲೇ ತಾಲಿಬಾನ್ ಸರ್ಕಾರಕ್ಕೆ ಔಪಚಾರಿಕ ಮಾನ್ಯತೆ ನೀಡಿದ್ದರೆ, ಇತರ ದೇಶಗಳು ವ್ಯಾಪಾರ ಮತ್ತು ಗಣಿಗಾರಿಕೆಯಂತಹ ಕ್ಷೇತ್ರಗಳಲ್ಲಿ ಅದರೊಂದಿಗೆ ವ್ಯವಹರಿಸುತ್ತಿವೆ. ಇಂತಹ ಸನ್ನಿವೇಶದಲ್ಲಿ ಪಾಶ್ಚಿಮಾತ್ಯ ದೇಶಗಳು ಪ್ರಾಯೋಗಿಕ ನಿಲುವನ್ನು ತಳೆಯುವ ತುರ್ತು ಅಗತ್ಯವಿದೆ. ತಾಲಿಬಾನ್ ಸರ್ಕಾರಕ್ಕೆ ಔಪಚಾರಿಕ ಮಾನ್ಯತೆ ನೀಡದಿದ್ದರೂ, ಅದರೊಂದಿಗೆ ಮಾತುಕತೆಯನ್ನು ಪ್ರಾರಂಭಿಸಬಹುದು ಎನ್ನುವ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ರಾಜತಾಂತ್ರಿಕ ಸಂಪರ್ಕದ ಮೂಲಕ ಭದ್ರತೆ, ಮಾನವೀಯ ನೆರವು ಮತ್ತು ಆರ್ಥಿಕ ವಿಚಾರಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಭಾವವನ್ನು ಬೀರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಾಲಿಬಾನ್ ಆಡಳಿತದಲ್ಲಿ ಸುಧಾರಣೆ ತರುವುದು ದೀರ್ಘ ಪ್ರಕ್ರಿಯೆಯಾಗಿದ್ದರೂ, ಮಾತುಕತೆಯಿಂದ ದೂರ ಉಳಿಯುವುದು ಪಾಶ್ಚಿಮಾತ್ಯ ದೇಶಗಳ ಹಿತದೃಷ್ಟಿಯಿಂದ ಸೂಕ್ತವಲ್ಲ.
ವಿಶ್ವಸಂಸ್ಥೆ ಸೇರಿದಂತೆ ಬಹುತೇಕ ಯಾವುದೇ ಪ್ರಮುಖ ದೇಶವು ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಅಂಗೀಕರಿಸಿಲ್ಲ. ಮಾನವ ಹಕ್ಕುಗಳ ರಕ್ಷಣೆ, ಮಹಿಳೆಯರ ಶಿಕ್ಷಣಕ್ಕೆ ಅವಕಾಶ ಮತ್ತು ಎಲ್ಲ ಸಮುದಾಯಗಳನ್ನೊಳಗೊಂಡ ಸರ್ಕಾರ ರಚಿಸುವವರೆಗೂ ಮಾನ್ಯತೆ ನೀಡುವುದಿಲ್ಲ ಎಂದು ವಿಶ್ವ ಸಮುದಾಯ ಸ್ಪಷ್ಟಪಡಿಸಿದೆ. ರಷ್ಯಾ, ಚೀನಾ, ಇರಾನ್ ಮತ್ತು ಪಾಕಿಸ್ತಾನದಂತಹ ಕೆಲವು ದೇಶಗಳು ಭದ್ರತೆ ಹಾಗೂ ವ್ಯಾಪಾರ ಹಿತಾಸಕ್ತಿಗಳಿಗಾಗಿ ತಾಲಿಬಾನ್ ಜೊತೆ ಒಡನಾಟ ಇಟ್ಟುಕೊಂಡಿದ್ದರೂ, ಪೂರ್ಣ ರಾಜತಾಂತ್ರಿಕ ಮಾನ್ಯತೆ ದೊರೆತಿಲ್ಲ.

ಮುಂದೇನು..?

ಈಗಾಗಲೇ ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿರುವ ತಾಲಿಬಾನ್, ಇನ್ನಷ್ಟು ಅವಧಿಗೆ ಮುಂದುವರಿಯುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಏಕೆಂದರೆ, ತಾಲಿಬಾನ್‌ನ ವಿರೋಧಿ ಪಡೆಗಳಿಗೆ ಯಾವುದೇ ವಿದೇಶಿ ಬೆಂಬಲ ಅಥವಾ ಶಸ್ತ್ರಾಸ್ತ್ರಗಳ ಪೂರೈಕೆ ಇಲ್ಲದಿರುವುದರಿಂದ ತಾಲಿಬಾನ್ ಅನ್ನು ಅಧಿಕಾರದಿಂದ ಸಂಪೂರ್ಣವಾಗಿ ಕೆಳಗಿಳಿಸುವುದು ಕಷ್ಟ. ಆದರೆ ವಿದೇಶಿ ನೆರವು ಮತ್ತು ಅಧಿಕೃತ ಮಾನ್ಯತೆ ಇಲ್ಲದೆ ದೇಶವು ತೀವ್ರ ಬಡತನದಲ್ಲೇ ಮುಂದುವರಿಯಲಿದೆ. ಕಂದಹಾರ್ ಮತ್ತು ಕಾಬೂಲ್ ಬಣಗಳ ನಡುವಿನ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದರೆ, ತಾಲಿಬಾನ್ ಒಳಗೆ ಆಂತರಿಕ ಸಂಘರ್ಷ ಸ್ಫೋಟಗೊಂಡು ನಾಯಕತ್ವ ಬದಲಾಗುವ ಸಾಧ್ಯತೆಯಿದೆ. ತೀವ್ರ ಆರ್ಥಿಕ ಕುಸಿತ ಮತ್ತು ಜನಸಾಮಾನ್ಯರ ಆಕ್ರೋಶವನ್ನು ತಪ್ಪಿಸಲು, ಅಂತಾರಾಷ್ಟ್ರೀಯ ಸಮುದಾಯದ ಷರತ್ತುಗಳಿಗೆ ಭಾಗಶಃ ಒಪ್ಪಿ ಮಹಿಳೆಯರ ಶಿಕ್ಷಣ ಮತ್ತು ಕೆಲಸದ ಮೇಲೆ ಹೇರಿರುವ ನಿರ್ಬಂಧಗಳನ್ನು ತಾಲಿಬಾನ್ ಭವಿಷ್ಯದಲ್ಲಿ ಕ್ರಮೇಣ ಸಡಿಲಿಸುವ ಸಾಧ್ಯತೆಯೂ ಇದೆ.

ಕಂದಹಾರ್ - ಕಾಬೂಲ್ ಬಣ

ಧಾರ್ಮಿಕ ಮುಖಂಡ ಹಿಬತುಲ್ಲಾ ಅಖುಂದ್‌ಜಾದಾ ನೇತೃತ್ವದ ಕಂದಹಾರ್ ಬಣವು ಕಠಿಣ ಷರಿಯಾ ಮತ್ತು ಪ್ರತ್ಯೇಕತಾವಾದವನ್ನು ಬೆಂಬಲಿಸುತ್ತದೆ. ಆದರೆ ಕಾಬೂಲ್‌ನಲ್ಲಿರುವ ಸಿರಾಜುದ್ದೀನ್ ಹಕ್ಕಾನಿ ಮತ್ತು ಮುಲ್ಲಾ ಬರದಾರ್ ಅವರಂತಹ ಪ್ರಾಯೋಗಿಕ ನಾಯಕರು ಆಡಳಿತ ನಡೆಸಲು, ಆರ್ಥಿಕತೆ ಸುಧಾರಿಸಲು ಮತ್ತು ವಿದೇಶಿ ಮಾನ್ಯತೆ ಪಡೆಯಲು ಮಹಿಳೆಯರ ಶಿಕ್ಷಣದ ಮೇಲಿನ ನಿಷೇಧವನ್ನು ಸಡಿಲಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ.

ಹಲವು ಬಣಗಳ ಹೋರಾಟ

ತಾಲಿಬಾನ್ ಆಡಳಿತಕ್ಕೆ ಹಲವು ಆಂತರಿಕ ಬಣಗಳು ಸವಾಲೊಡ್ಡಿದ್ದು, ಈ ಬಣಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ ಪಡೆಯಲು ಯತ್ನಿಸುತ್ತಿವೆ.
ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್‌ಆರ್‌ಎಫ್): ಅಹ್ಮದ್ ಮಸೂದ್ (ಹಿಂದಿನ ನಾಯಕ ಅಹ್ಮದ್ ಶಾ ಮಸೂದ್ ಪುತ್ರ) ನೇತೃತ್ವದ ಈ ಪಡೆ ಪಂಜ್‌ಶೀರ್ ಕಣಿವೆ ಮತ್ತು ಉತ್ತರ ಅಫ್ಘಾನಿಸ್ತಾನದ ಭಾಗಗಳಲ್ಲಿ ಸಕ್ರಿಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಎಲ್ಲ ಸಮುದಾಯಗಳ ಪ್ರಾತಿನಿಧ್ಯ ಮತ್ತು ಮಹಿಳಾ ಹಕ್ಕುಗಳ ಮರುಸ್ಥಾಪನೆ ಇವರ ಮುಖ್ಯ ಗುರಿಯಾಗಿದೆ.
ಅಫ್ಘಾನಿಸ್ತಾನ್ ಫ್ರೀಡಮ್ ಫ್ರಂಟ್ (ಎಎಫ್‌ಎಫ್): ಹಿಂದಿನ ಅಫ್ಘಾನ್ ಸೇನೆಯ ಮಾಜಿ ಅಧಿಕಾರಿಗಳು ಮತ್ತು ಸೈನಿಕರನ್ನು ಒಳಗೊಂಡಿರುವ ಈ ಗುಂಪು, ತಾಲಿಬಾನ್ ನೆಲೆಗಳು ಮತ್ತು ಚೆಕ್‌ಪೋಸ್ಟ್‍ಗಳ ಮೇಲೆ ಗೆರಿಲ್ಲಾ ಮಾದರಿಯ ಆಕ್ರಮಣಗಳನ್ನು ನಡೆಸುತ್ತಿದೆ.
ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ಐಎಸ್‌ಕೆ): ಇದು ತಾಲಿಬಾನ್‌ಗಿಂತಲೂ ಹೆಚ್ಚು ಕಠಿಣ ಮತ್ತು ಮತಾಂಧ ಸಿದ್ಧಾಂತ ಹೊಂದಿರುವ ಭಯೋತ್ಪಾದಕ ಸಂಘಟನೆ. ತಾಲಿಬಾನ್ ಅನ್ನು "ಮೃದು ಧೋರಣೆಯುಳ್ಳವರು' ಎಂದು ಕರೆಯುವ ಐಎಸ್‌ಕೆ, ಶಿಯಾ ಮುಸ್ಲಿಮರು, ಅಲ್ಪಸಂಖ್ಯಾತರು ಮತ್ತು ತಾಲಿಬಾನ್ ನಾಯಕರನ್ನೇ ಗುರಿಯಾಗಿಸಿಕೊಂಡು ಮಾರಕ ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸುತ್ತಿದೆ.
ನಾಗರಿಕ ಮತ್ತು ಮಹಿಳಾ ಪ್ರತಿರೋಧ: ಶಸ್ತ್ರಾಸ್ತ್ರಗಳಿಲ್ಲದಿದ್ದರೂ, ಮಹಿಳೆಯರು ರಹಸ್ಯ ಶಾಲೆಗಳನ್ನು ನಡೆಸುವುದು, ಅಂತರ್ಜಾಲದ ಮೂಲಕ ಶೈಕ್ಷಣಿಕ ನೆಟ್‌ವರ್ಕ್‌ಗಳನ್ನು ರೂಪಿಸುವುದು ಮತ್ತು ಆಗಾಗ್ಗೆ ಸಣ್ಣ ಪ್ರಮಾಣದ ಬೀದಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಆಡಳಿತಕ್ಕೆ ಸವಾಲೊಡ್ಡುತ್ತಿದ್ದಾರೆ.

ಭಾರತದ ಎಚ್ಚರಿಕೆಯ ಹೆಜ್ಜೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಭಾರತವು ಎಚ್ಚರಿಕೆಯ ರಾಜತಾಂತ್ರಿಕತೆ ನೀತಿಯನ್ನು ಅಳವಡಿಸಿಕೊಂಡಿದೆ. ಅಧಿಕೃತ ರಾಜಕೀಯ ಮಾನ್ಯತೆ ನೀಡದೆ, ತನ್ನ ರಾಷ್ಟ್ರೀಯ ಭದ್ರತೆ ಮತ್ತು ಮಾನವೀಯ ಕಾಳಜಿಗಳಿಗೆ ಆದ್ಯತೆ ನೀಡಿದೆ. ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತವು ಪೂರ್ಣ ಪ್ರಮಾಣದ ರಾಯಭಾರಿಯನ್ನು ನಿಯೋಜಿಸದೆ, ತಾಂತ್ರಿಕ ತಂಡವನ್ನು ನಿಯೋಜಿಸಿದೆ. ಇದು ಮಾನವೀಯ ನೆರವಿನ ವಿತರಣೆ ಮತ್ತು ದ್ವಿಪಕ್ಷೀಯ ಸಂವಹನವನ್ನು ನಿರ್ವಹಿಸುತ್ತದೆ. ಪ್ರಾದೇಶಿಕ ಭದ್ರತೆ ಮತ್ತು ವ್ಯಾಪಾರದ ದೃಷ್ಟಿಯಿಂದ ಭಾರತದ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳು ತಾಲಿಬಾನ್ ಪ್ರತಿನಿಧಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ. ಅಲ್ಲದೆ, ಭಾರತವು ಅಫ್ಘಾನಿಸ್ತಾನದ ಜನಸಾಮಾನ್ಯರ ಜೊತೆಗಿನ ಐತಿಹಾಸಿಕ ಬಾಂಧವ್ಯವನ್ನು ಮುಂದುವರಿಸಲು ದೊಡ್ಡ ಪ್ರಮಾಣದ ಮಾನವೀಯ ನೆರವನ್ನು ನೀಡುತ್ತಿದೆ. ವಿಶ್ವ ಆಹಾರ ಕಾರ್ಯಕ್ರಮದ ಸಹಯೋಗದಲ್ಲಿ ಸಾವಿರಾರು ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡಲಾಗಿದೆ. ಜೀವ ಉಳಿಸುವ ಅಗತ್ಯ ಔಷಧಗಳು, ಲಸಿಕೆಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಕಾಬೂಲ್‌ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ನಿರಂತರವಾಗಿ ಕಳುಹಿಸಲಾಗುತ್ತಿದೆ. ಭಾರತದಲ್ಲಿ ಓದುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸ್‌ಗಳು ಮತ್ತು ವಿದ್ಯಾರ್ಥಿವೇತನಗಳ ಮೂಲಕ ಬೆಂಬಲ ನೀಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net