ವಿಚಿತ್ರ ಮದುವೆ ದುರಂತ; ನಕಲಿ ಹೆಸರು, ಲಕ್ಷ ಲಕ್ಷ ಸಾಲ, ಮದುವೆಯಾದ 9ನೇ ದಿನಕ್ಕೆ ಡಿವೋರ್ಸ್ ಕೇಳಿದ ಪತಿ!.. Flash Marriage Divorce

China Flash Marriage Divorce
China Flash Marriage Divorce
Published on

ಪ್ರಮುಖ ಮುಖ್ಯಾಂಶಗಳು

  • 5 ನಿಮಿಷದ ವಿಡಿಯೋ ಕಾಲ್ ಬೆನ್ನಲ್ಲೇ ಪೋಷಕರ ಒತ್ತಡದಿಂದ 3 ದಿನಗಳಲ್ಲಿ ಮದುವೆಯಾದ ಚೀನಾ ಯುವಕ.
  • ಮದುವೆಗಾಗಿ ವಧುದಕ್ಷಿಣೆ ಮತ್ತು ಮ್ಯಾಚ್‌ಮೇಕಿಂಗ್ ಫೀಸ್ ಸೇರಿ ಒಟ್ಟು 36.95 ಲಕ್ಷ ವ್ಯಯ.
  • ಮದುವೆ ಬೆನ್ನಲ್ಲೇ ಪತ್ತೆಯಾಯ್ತು ವಂಚಕಿಯ ಅಸಲಿಯತ್ತು, ಡಿವೋರ್ಸ್​​ಗೆ ಅರ್ಜಿ
ಬೀಜಿಂಗ್: 26ರಿಂದ 30ಕ್ಕೆ ವಯಸ್ಸು ದಾಟುತ್ತಿದೆ ಎಂದಾಗಲೇ ಪೋಷಕರು ಮದುವೆ ಆಗುವಂತೆ ಒತ್ತಡ ಹೇರುತ್ತಾರೆ. ಗಡಿಬಿಡಿಯಲ್ಲಿ ಅಪ್ಲಿಕೇಶನ್​ಗಳ ಮೂಲಕ ಪರಿಚಯವಾಗುವವರನ್ನು ಮದುವೆಯಾಗಿ ಮೋಸ ಹೋಗುವುದು ಅಥವಾ ಇನ್ನೇನೋ ಸಮಸ್ಯೆಯಾಗುವ ಸುದ್ದಿಗಳು ಕೇಳುತ್ತಲೇ ಇರುತ್ತೇವೆ. ಸದ್ಯ ಇಂತದ್ದೇ ಒಂದು ಘಟನೆಯನ್ನು ಚೀನಾದ ಪೂರ್ವ ಪ್ರಾಂತ್ಯದ ಝೆಜಿಯಾಂಗ್‌ನ ವ್ಯಕ್ತಿಯೊಬ್ಬರು ಅನುಭವಿಸಿದ್ದಾರೆ.
ಹೌದು ಝೆಜಿಯಾಂಗ್‌ನ 32 ವರ್ಷದ ಗು ಎಂಬುವವರು, ಪೋಷಕರ ಒತ್ತಡಕ್ಕೆ ಮಣಿದು, ಕೇವಲ 5 ನಿಮಿಷಗಳ ವೀಡಿಯೊ ಕಾಲ್ ಮೂಲಕ ಪರಿಚಯವಾದ ಯುವತಿಯನ್ನು ಮದುವೆಯಾಗಿ, ಕೇವಲ ಮೂರೇ ದಿನಗಳಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಂಚನೆಗೆ ಒಳಗಾಗಿರುವ ಪತಿ, ಈಗ ಪತ್ನಿಯಿಂದ ವಿಚ್ಛೇದನ ಕೋರುವುದರ ಜೊತೆಗೆ ತನಗೆ ವಂಚಿಸಿದ ಮ್ಯಾಚ್‌ಮೇಕಿಂಗ್ ಸಂಸ್ಥೆಯ ವಿರುದ್ಧವೂ ಮೊಕದ್ದಮೆ ಹೂಡಿದ್ದಾರೆ.

ಆಗಿದ್ದೇನು?

ಗು ತಮ್ಮ ಪೋಷಕರಿಗೆ ಇವರೊಬ್ಬರೇ ಏಕೈಕ ಪುತ್ರ ನಾವು ಕಣ್ಮುಚ್ಚುವ ಮುನ್ನ ಮದುವೆಯಾಗು ಎಂದು ಒತ್ತಡ ಹೇರಿದ್ದರು. ಹೀಗಾಗಿ ಅವರು ಸ್ಥಳೀಯ ಮ್ಯಾಚ್‌ಮೇಕಿಂಗ್ ಕೇಂದ್ರವೊಂದರಲ್ಲಿ 200 ಯುವಾನ್ (ಭಾರತೀಯ ರೂಪಾಯಿಯಲ್ಲಿ 2,788) ಪಾವತಿಸಿ ನೋಂದಾಯಿಸಿಕೊಂಡಿದ್ದರು. ಈ ಕೇಂದ್ರವು ಅವರಿಗೆ ವಾಯುವ್ಯ ಚೀನಾದ ಶಾಂಕ್ಸಿ ಪ್ರಾಂತ್ಯದ 30 ವರ್ಷದ ಮಹಿಳೆಯನ್ನು ಪರಿಚಯಿಸಿತ್ತು.

ಎಲ್ಲವೂ ಮೋಸ

ಆ ಯುವತಿಯ ಆನ್‌ಲೈನ್ ಪ್ರೊಫೈಲ್‌ನಲ್ಲಿ ತನಗೆ ಯಾವುದೇ ಸಾಲಗಳಿಲ್ಲ, ಅಪರಾಧ ಹಿನ್ನೆಲೆಯಿಲ್ಲ ಮತ್ತು ಯಾವುದೇ ಗಂಭೀರ ಕಾಯಿಲೆ ಅಥವಾ ಆನುವಂಶಿಕ ಕಾಯಿಲೆಗಳಿಲ್ಲ ಎಂದು ನಮೂದಿಸಲಾಗಿತ್ತು. ಜೊತೆಗೆ "ಫ್ಲ್ಯಾಶ್ ಮ್ಯಾರೇಜ್" ಮತ್ತು ದೂರದ ಊರಿಗೆ ಮದುವೆಯಾಗಿ ಹೋಗಲು ತಾನು ಸಿದ್ಧ ಎಂದು ಬರೆದುಕೊಂಡಿದ್ದಳು. ಇಬ್ಬರ ನಡುವೆ ನಡೆದ ಐದು ನಿಮಿಷಗಳ ವಿಡಿಯೋ ಕಾಲ್‌ನಲ್ಲಿ, ಗು ಅವರು ಯುವತಿಯ ಕೆಲಸ ಮತ್ತು ಕುಟುಂಬದ ಬಗ್ಗೆ ಕೇಳಿದಾಗ, ಬಹುತೇಕ ಪ್ರಶ್ನೆಗಳಿಗೆ ಮ್ಯಾಚ್‌ಮೇಕರ್ ಉತ್ತರಿಸಿದ್ದರು ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ತಾವು ಸೇಲ್ಸ್‌ಪರ್ಸನ್ ಆಗಿ ಕೆಲಸ ಮಾಡುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದರು. ಮದುವೆಗೆ ಮುಂಚಿತವಾಗಿ ಆಕೆಯ ಕ್ರೆಡಿಟ್ ಹಿಸ್ಟರಿ ರಿಪೋರ್ಟ್ ಮತ್ತು ವೈದ್ಯಕೀಯ ತಪಾಸಣಾ ವರದಿಯನ್ನು ನೀಡುವುದಾಗಿ ಮ್ಯಾಚ್‌ಮೇಕಿಂಗ್ ಕೇಂದ್ರವು ಭರವಸೆ ನೀಡಿತ್ತು.

ಮದುವೆಗೆ ಲಕ್ಷ ಲಕ್ಷ ಖರ್ಚು

ಯುವತಿಯನ್ನು ಒಮ್ಮೆಯೂ ನೇರವಾಗಿ ಭೇಟಿಯಾಗದ ಗು ನೇರ ಮದುವೆ ಮಾಡಿಕೊಳ್ಳಲು ಮುಂದಾದರು. ಮದುವೆಗಾಗಿ ಒಟ್ಟು 265,000 ಯುವಾನ್ (ಭಾರತೀಯ ರೂಪಾಯಿಗಳಲ್ಲಿ 36.95 ಲಕ್ಷ) ಖರ್ಚು ಮಾಡಲಾಗಿತ್ತು. ಇದರಲ್ಲಿ 100,000 ಯುವಾನ್ (ಭಾರತೀಯ ರೂಪಾಯಿಗಳಲ್ಲಿ 13.94 ಲಕ್ಷ) ವಧುದಕ್ಷಿಣೆ ಮತ್ತು 160,000 ಯುವಾನ್ (ಭಾರತೀಯ ರೂಪಾಯಿಗಳಲ್ಲಿ 22.31 ಲಕ್ಷ) ಮ್ಯಾಚ್‌ಮೇಕಿಂಗ್ ಶುಲ್ಕ ಸೇರಿತ್ತು. ಇದಾದ ನಂತರ ಮ್ಯಾಚ್‌ಮೇಕರ್ ಆ ಮಹಿಳೆಯನ್ನು ಗು ಅವರ ನಗರಕ್ಕೆ ಕರೆತಂದಿದ್ದು, ಮೂರೇ ದಿನಗಳಲ್ಲಿ ಇಬ್ಬರ ಮದುವೆ ನೋಂದಣಿಯಾಯಿತು. ವಿಶೇಷವೆಂದರೆ ಗು ಕುಟುಂಬದವರು ವಧುವಿನ ಪೋಷಕರನ್ನು ಭೇಟಿಯಾಗಲೇ ಇಲ್ಲ.

ಮದುವೆಯಾದ ಮೇಲೆ ಗೊತ್ತಾಗಿದ್ದು ಅಸಲಿ ಕತೆ

ಗು ತಮ್ಮ ಪತ್ನಿಯ ಕ್ರೆಡಿಟ್ ವರದಿಯನ್ನು ಪರಿಶೀಲಿಸಲು ಬ್ಯಾಂಕ್‌ಗೆ ಹೋದಾಗ ಆಕೆ ಹೆಸರಿನಲ್ಲಿ ಬರೋಬ್ಬರಿ 100,000 ಯುವಾನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 13.94 ಲಕ್ಷ ಸಾಲ ಇರುವುದು ತಿಳಿಯಿತು. ಈ ಬಗ್ಗೆ ಕೇಳಿದಾಗ, ಆ ಸಾಲ ತನ್ನ ಮಾಜಿ ಪ್ರೇಮಿಗೆ ಸೇರಿದ್ದು ಎಂದು ಹೇಳಿಕೊಂಡಿದ್ದಾಳೆ
ಅಷ್ಟೇ ಅಲ್ಲದೆ, ರಿಯಲ್-ನೇಮ್ ವೆರಿಫಿಕೇಶನ್ ಅಗತ್ಯವಿರುವ ಆಕೆಯ ಮೊಬೈಲ್ ಪೇಮೆಂಟ್ ಆಪ್‌ನಲ್ಲಿನ ಹೆಸರು, ಮ್ಯಾಚ್‌ಮೇಕರ್ಸ್ ನೀಡಿದ್ದ ಹೆಸರಿಗೆ ಹೊಂದಿಕೆಯಾಗುತ್ತಿರಲಿಲ್ಲ. ನಂತರ ಆಕೆ ತನಗೆ ಲಿವರ್ ಎಂಜೈಮ್‌ಗಳ ಸಮಸ್ಯೆ ಇದೆ ಮತ್ತು ತೂಕ ಇಳಿಸಿಕೊಳ್ಳಬೇಕಾಗಿದೆ ಎಂದು ಒಪ್ಪಿಕೊಂಡಳು. ಆದರೆ ಇದು ತನ್ನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದಳು.

ಉಲ್ಟಾ ಹೊಡೆದ ವಂಚಕಿ

ಮದುವೆಯಾದ ಕೇವಲ 9 ದಿನಗಳಲ್ಲೇ ತನಗಾದ ವಂಚನೆಯನ್ನು ಅರಿತ ಗು, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಮಹಿಳೆ ಆರಂಭದಲ್ಲಿ ಇದಕ್ಕೆ ಒಪ್ಪಿಕೊಂಡರೂ, ನಂತರ ಉಲ್ಟಾ ಹೊಡೆದು ಪತಿಯ ವಿರುದ್ಧವೇ ಮೊಕದ್ದಮೆ ಹೂಡಿದಳು. ಪತಿಯ ವಿಚ್ಛೇದನದ ಬೇಡಿಕೆಯಿಂದ ತಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಆರೋಪಿಸಿ 50,000 ಯುವಾನ್ 6 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಬೇಡಿಕೆಯಿಟ್ಟಿದ್ದಾಳೆ.
ಇತ್ತ ತನಗೆ ವಂಚಿಸಿದ ಮ್ಯಾಚ್‌ಮೇಕಿಂಗ್ ಕೇಂದ್ರದ ವಿರುದ್ಧವೂ ಗು ಮೊಕದ್ದಮೆ ಹೂಡಿದ್ದು, ತಾನು ನೀಡಿದ ಶುಲ್ಕವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ದಂಪತಿಗಳೇ ಯೋಜಿತವಾಗಿ ಈ ಜಗಳವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಮ್ಯಾಚ್‌ಮೇಕಿಂಗ್ ಕೇಂದ್ರವು ಹಣವನ್ನು ಮರುಪಾವತಿಸಲು ನಿರಾಕರಿಸಿದೆ. ಸದ್ಯ ಪ್ರಕರಣದ ಅರ್ಜಿಗಳ ವಿಚಾರಣೆ ಮುಂದುವರೆದಿದ್ದು, ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net