ಅಮೆರಿಕದ ದಿಗ್ಬಂಧನ ಸೀಳಿದ 34 ಟ್ಯಾಂಕರ್‌ಗಳು! ಟ್ರಂಪ್ ಕಣ್ಣಿಗೆ ಮಣ್ಣೆರಚಿದ ಇರಾನ್‌ನ 'ಘೋಸ್ಟ್' ನೌಕೆಗಳು: 910 ಮಿಲಿಯನ್ ಡಾಲರ್ ತೈಲ ಮಾಯವಾಗಿದ್ದೆಲ್ಲಿ? Iran Oil Tankers

ಅಮೆರಿಕದ ದಿಗ್ಬಂಧನ ಸೀಳಿದ 34 ಟ್ಯಾಂಕರ್‌ಗಳು! ಟ್ರಂಪ್ ಕಣ್ಣಿಗೆ ಮಣ್ಣೆರಚಿದ ಇರಾನ್‌ನ 'ಘೋಸ್ಟ್' ನೌಕೆಗಳು: 910 ಮಿಲಿಯನ್ ಡಾಲರ್ ತೈಲ ಮಾಯವಾಗಿದ್ದೆಲ್ಲಿ?
ಅಮೆರಿಕದ ದಿಗ್ಬಂಧನ ಸೀಳಿದ 34 ಟ್ಯಾಂಕರ್‌ಗಳು! ಟ್ರಂಪ್ ಕಣ್ಣಿಗೆ ಮಣ್ಣೆರಚಿದ ಇರಾನ್‌ನ 'ಘೋಸ್ಟ್' ನೌಕೆಗಳು: 910 ಮಿಲಿಯನ್ ಡಾಲರ್ ತೈಲ ಮಾಯವಾಗಿದ್ದೆಲ್ಲಿ?
Published on
ಟೆಹ್ರಾನ್: ಇರಾನ್ ಮೇಲೆ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವು ಅದ್ಭುತ ಯಶಸ್ಸು ಕಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಈ ಹೇಳಿಕೆಯನ್ನು ಸುಳ್ಳು ಮಾಡುವಂತಹ ವರದಿಯೊಂದು ಹೊರಬಿದ್ದಿದೆ. ದಿ ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಕನಿಷ್ಠ 34 ಇರಾನ್(Iran Oil Tankers) ಸಂಬಂಧಿತ ತೈಲ ನೌಕೆಗಳು ಅಮೆರಿಕದ ನೌಕಾಪಡೆಯ ಕಣ್ತಪ್ಪಿಸಿ ಅಂತಾರಾಷ್ಟ್ರೀಯ ಜಲಪ್ರದೇಶಕ್ಕೆ ಲಗ್ಗೆ ಇಟ್ಟಿವೆ ಎಂದು ತಿಳಿಸಿದೆ.

ಟ್ರಂಪ್‌ ಹೇಳಿದ್ದೇನು? ವಾಸ್ತವವೇನು..?

ಇತ್ತೀಚೆಗೆ ಸಿಎನ್‌ಬಿಸಿ (CNBC) ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ನಮ್ಮ ನೌಕಾ ದಿಗ್ಬಂಧನವು ಇರಾನ್‌ನ ಆರ್ಥಿಕ ಬೆನ್ನೆಲುಬನ್ನು ಮುರಿದಿದೆ, ಇದು ಅದ್ಭುತ ಯಶಸ್ಸು ಎಂದು ಹೇಳಿಕೊಂಡಿದ್ದರು. ಆದರೆ ವೋರ್ಟೆಕ್ಸಾ ಡೇಟಾ ಪ್ರಕಾರ, ವಾಸ್ತವ ಚಿತ್ರಣವೇ ಬೇರೆಯಾಗಿದೆ.
34 ನೌಕೆಗಳ ಪರಾರಿ: ಒಟ್ಟು 34 ಟ್ಯಾಂಕರ್‌ಗಳು ಅಮೆರಿಕದ ದಿಗ್ಬಂಧನವನ್ನು ಮೀರಿ ಸಂಚರಿಸಿವೆ. ಇದರಲ್ಲಿ 19 ನೌಕೆಗಳು ಗಲ್ಫ್ ಪ್ರದೇಶದಿಂದ ಹೊರಹೋಗಿದ್ದರೆ, 15 ನೌಕೆಗಳು ಅರೇಬಿಯನ್ ಸಮುದ್ರದ ಮೂಲಕ ಇರಾನ್ ಕಡೆಗೆ ಸಾಗಿವೆ.
1 ಕೋಟಿ ಬ್ಯಾರೆಲ್ ತೈಲ ಸಾಗಾಟ: ಈ ಪೈಕಿ ಕನಿಷ್ಠ 6 ನೌಕೆಗಳಲ್ಲಿ ಸುಮಾರು 10.7 ಮಿಲಿಯನ್ ಬ್ಯಾರೆಲ್ ಇರಾನ್ ಕಚ್ಚಾ ತೈಲ ಸಾಗಣೆಯಾಗಿದೆ ಎಂದು ದೃಢಪಟ್ಟಿದೆ.
910 ಮಿಲಿಯನ್ ಡಾಲರ್ ಆದಾಯ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲಕ್ಕಿಂತ 10 ಡಾಲರ್ ರಿಯಾಯಿತಿಯಲ್ಲಿ ಇರಾನ್ ತೈಲ ಮಾರಾಟ ಮಾಡುತ್ತಿದ್ದರೂ, ಈ ಒಂದು ರವಾನೆಯಿಂದ ಇರಾನ್‌ಗೆ ಸುಮಾರು 910 ಮಿಲಿಯನ್ ಡಾಲರ್ (ಅಂದಾಜು 7,500 ಕೋಟಿ ರೂ.) ಆದಾಯ ಹರಿದುಬಂದಿದೆ ಎನ್ನಲಾಗಿದೆ.

ಕಣ್ತಪ್ಪಿಸಲು ಇರಾನ್ ಬಳಸಿದ 'ಘೋಸ್ಟ್' ತಂತ್ರ!

ಅಮೆರಿಕದ ಅತ್ಯಾಧುನಿಕ ಸರ್ವೈಲೆನ್ಸ್ ವ್ಯವಸ್ಥೆಯನ್ನು ಇರಾನ್ ಹೇಗೆ ಮೀರಿತು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಟ್ರಾನ್ಸ್‌ಪಾಂಡರ್ ಆಫ್: ದೊರೇನಾ ಎಂಬ ಇರಾನ್‌ನ ಸೂಪರ್ ಟ್ಯಾಂಕರ್ ತನ್ನ ಸಿಗ್ನಲ್ ನೀಡುವ ಟ್ರಾನ್ಸ್‌ಪಾಂಡರ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ, ಸಮುದ್ರದಲ್ಲಿ ನಿಗೂಢ ನೌಕೆಯಂತೆ ಸಾಗಿದೆ. ಇದು ಮ್ಯಾರಿಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ನಡೆಸಿದ ತಂತ್ರ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕ ಸೆಂಟ್ರಲ್ ಕಮಾಂಡ್ ಸಮರ್ಥನೆ

ಈ ವೈಫಲ್ಯದ ನಡುವೆಯೂ ಅಮೆರಿಕದ ಸೇನೆ ತನ್ನ ಸಾಧನೆಯನ್ನು ಸಮರ್ಥಿಸಿಕೊಂಡಿದೆ. ಟ್ಯೂಸ್‌ಡೇ ನೀಡಿದ ಹೇಳಿಕೆಯಲ್ಲಿ, ಅಮೆರಿಕದ ಪಡೆಗಳು ಇದುವರೆಗೆ 28 ನೌಕೆಗಳನ್ನು ತಡೆದು ವಾಪಸ್ ಇರಾನ್ ಬಂದರುಗಳಿಗೆ ಕಳುಹಿಸಿವೆ ಮತ್ತು ಓಮನ್ ಕೊಲ್ಲಿಯಲ್ಲಿ ಒಂದು ಕಂಟೈನರ್ ಹಡಗನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದೆ.

ಮಾತುಕತೆಗೆ ಅಡ್ಡಿಯಾಗಲಿದೆಯೇ ಈ ಬೆಳವಣಿಗೆ..?

ಇರಾನ್ ಮತ್ತು ಅಮೆರಿಕ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಈ ವರದಿ ಹೊರಬಂದಿರುವುದು ಟ್ರಂಪ್ ಆಡಳಿತಕ್ಕೆ ಮುಜುಗರ ತಂದಿದೆ. ಅಂತಿಮ ಒಪ್ಪಂದವಾಗುವವರೆಗೆ ಸ್ಟ್ರೈಟ್ ಆಫ್ ಹೋರ್ಮುಜ್ ಮತ್ತು ಪ್ರಮುಖ ಜಲಮಾರ್ಗಗಳ ಮೇಲೆ ನಮ್ಮ ನಿಯಂತ್ರಣ ಮುಂದುವರಿಯುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಆದರೆ, ಇರಾನ್ ತನ್ನ ತೈಲವನ್ನು ರಹಸ್ಯವಾಗಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗುತ್ತಿರುವುದು ಸಂಧಾನದ ವೇಳೆ ಇರಾನ್‌ನ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net