_1777312745189.webp?w=480&auto=format%2Ccompress&fit=max)
_1777312745189.webp?w=480&auto=format%2Ccompress&fit=max)
ದುಬೈ: ಕೊಲ್ಲಿಯಲ್ಲಿ ಶಾಂತಿ ಮರುಸ್ಥಾಪಿಸುವ ಉದ್ದೇಶದಿಂದ ಅಮೆರಿಕಾ ಹಾಗೂ ಇರಾನ್ ನಡುವೆ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದ 2ನೇ ಹಂತದ ಶಾಂತಿ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ, ಇರಾನ್ 3 ಹೊಸ ಷರತ್ತುಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರಿಗಿಟ್ಟಿದೆ.
ಇರಾನ್ ತನ್ನ ಈ ಪ್ರಸ್ತಾವನೆಯನ್ನು ಮಧ್ಯವರ್ತಿಗಳಾಗಿರುವ ಪಾಕಿಸ್ತಾನ, ಟರ್ಕಿ, ಈಜಿಪ್ತ್ ಮತ್ತು ಕತಾರ್ ಮೂಲಕ ಅಮೆರಿಕಕ್ಕೆ ತಲುಪಿಸಿದೆ. ಮೊದಲ ಷರತ್ತಿನ ಪ್ರಕಾರ ಅಮೆರಿಕ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಜತೆಗೆ ಇರಾನ್ ಮತ್ತು ಲೆಬನಾನ್ ಮೇಲೆ ಮತ್ತೆ ದಾಳಿ ಮಾಡಲ್ಲ ಎಂಬ ಖಾತರಿ ನೀಡಬೇಕು. ಮೊದಲ ಷರತ್ತಿಗೆ ಒಪ್ಪಿಗೆ ಸೂಚಿಸಿದ ಬಳಿಕ ಎರಡನೇ ಷರತ್ತಿನ ಕುರಿತು ಮಾತುಕತೆ ನಡೆಯಲಿದೆ. ಹೊಮುಜ್ ಜಲಸಂಧಿ ನಿರ್ವಹಣೆ, ಅದರ ಆಡಳಿತದ ಕುರಿತ ಚರ್ಚೆಗಳ ಮೇಲೆ 2ನೇ ಷರತ್ತು ಕೇಂದ್ರೀಕೃತವಾಗಿದೆ. ಈ ಸುತ್ತಿನ ಮಾತುಕತೆ ಫಲಪ್ರದವಾದರೆ ಮಾತ್ರ ಮೂರನೇ ಹಂತದ ಮಾತುಕತೆಯಲ್ಲಿ ಪರಮಾಣು ಕಾರ್ಯಕ್ರಮ ವಿಷಯ ರ್ಚಚಿಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕು, ತನ್ನಲ್ಲಿರುವ ಪುಷ್ಟೀಕರಿಸಿದ ಯುರೇನಿಯಂ ಅನ್ನು ದೇಶದಿಂದ ಹೊರಗೆ ಸಾಗಿಸಬೇಕು ಎಂದು ಅಮೆರಿಕ ನಿರಂತರವಾಗಿ ಒತ್ತಾಯಿಸುತ್ತಿದೆ. ಹಾಗಾಗಿ ಮೂರನೇ ಹಂತದ ಮಾತುಕತೆ ಪ್ರಾಮುಖ್ಯ ಪಡೆದುಕೊಂಡಿದೆ. ಈ ಪ್ರಸ್ತಾಪದ ಅಡಿ ದಿಗ್ಬಂಧನ ತೆಗೆದುಹಾಕಿ ಯುದ್ಧ ಕೊನೆಗೊಂಡರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾನ ದುರ್ಬಲಗೊಳ್ಳಬಹುದು ಎನ್ನಲಾಗುತ್ತಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ರಾಜತಾಂತ್ರಿಕವಾಗಿ ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇರಾನ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ‘ಪಾಕಿಸ್ತಾನ ನಮ್ಮ ಒಳ್ಳೆಯ ಸ್ನೇಹಿತ. ಆದರೆ ಅದು ಮಾತುಕತೆಗೆ ಸೂಕ್ತವಾದ ಮಧ್ಯವರ್ತಿಯಲ್ಲ, ಮಧ್ಯಸ್ಥಿಕೆಗೆ ಅಗತ್ಯವಾದ ವಿಶ್ವಾಸಾರ್ಹತೆ ಹೊಂದಿಲ್ಲ. ಪಾಕಿಸ್ತಾನವು ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿದೆ. ಹಾಗಾಗಿ ಅದು ಅಮೆರಿಕದ ನಿಲುವುಗಳನ್ನು ಪ್ರಶ್ನಿಸುವುದಿಲ್ಲ. ಅಮೆರಿಕ ಮೊದಲು ಪಾಕಿಸ್ತಾನದ ಪ್ರಸ್ತಾಪ ಒಪ್ಪಿಕೊಂಡು ನಂತರ ಮಾತುಕತೆಯಿಂದ ಹಿಂದೆ ಸರಿಯಿತು ಎಂಬುದನ್ನು ಜಗತ್ತಿಗೆ ಹೇಳಲು ಅದು ಸಿದ್ಧವಿಲ್ಲ. ಇದು ಮಾತುಕತೆಯ ವೇಳೆ ಪಾಕಿಸ್ತಾನ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಕುರಿತು ಪ್ರಶ್ನೆ ಹುಟ್ಟುಹಾಕಿದೆ’ ಎಂದು ಇರಾನ್ ವಕ್ತಾರ ಇಬ್ರಾಹಿಂ ರಜಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಿಬ್ಬಂದಿಯಿದ್ದ ಟೊಗೊ ಧ್ವಜ ಹೊಂದಿರುವ ಎಂಟಿ ಸಿರೋನ್ ಎಂಬ ರಾಸಾಯನಿಕ ಟ್ಯಾಂಕರ್ ಮೇಲೆ ಓಮಾನ್ ಕರಾವಳಿಯ ಬಳಿ ಇರಾನ್ ಸೇನೆ ದಾಳಿ ನಡೆಸಿದೆ. ಹಡಗನ್ನು ತಡೆದ ಇರಾನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದ್ದಾರೆ. ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಮತ್ತು ಈ ಪ್ರದೇಶದಲ್ಲಿ ನಾವಿಕರು ಹಾಗೂ ಹಡಗು ಕಾರ್ಯಾಚರಣೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶಕ ಮನ್ದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ.