ಇರಾನ್ ಯುದ್ಧಕ್ಕೆ 100 ದಿನ; ಇನ್ನೂ ನಿಲ್ಲದ ಕದನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಈ ವರ್ಷದ ಫೆ. 28ರಂದು ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜತೆಗೂಡಿ ಆರಂಭಿಸಿದ ಯುದ್ಧ ಭಾನುವಾರಕ್ಕೆ 100 ದಿನ ಪೂರೈಸಿದೆ. ಏಪ್ರಿಲ್ 8ರಂದು ಕದನ ವಿರಾಮ ಘೊಷಣೆಯಾಗಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಜಾರಿಯೇ ಆಗಿಲ್ಲ. ಸಣ್ಣ ಪ್ರಮಾಣದಲ್ಲಿ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಶಾಂತಿ ಮಾತುಕತೆಗಳು ಪದೇಪದೆ ವಿಫಲಗೊಳ್ಳುತ್ತಿವೆ. ಅಪಾರ ಸಾವು-ನೋವು ಕೂಡ ಸಂಭವಿಸಿದೆ. ಲಕ್ಷಾಂತರ ಜನ ಸೂರು ಕಳೆದುಕೊಂಡಿದ್ದಾರೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊಮುಜ್ ಜಲಸಂಧಿ ಇನ್ನೂ ಮುಚ್ಚಿಯೇ ಇದೆ. ತತ್ಪರಿಣಾಮ, ಕಚ್ಚಾ ತೈಲದ ಬೆಲೆ ಗಗನಕ್ಕೇರಿ, ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಇನ್ನಾದರೂ ಯುದ್ಧ ನಿಲ್ಲುತ್ತದೆಯೇ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

ಏಳು ಸಾವಿರ ಜನರ ಸಾವು

ಲಭ್ಯ ಅಂಕಿಅಂಶಗಳ ಪ್ರಕಾರ, ಇಡೀ ಸಂಘರ್ಷದಲ್ಲಿ ಇದುವರೆಗೆ 7000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 10990 ಜನ ಗಾಯಗೊಂಡಿದ್ದಾರೆ. ಅಮೆರಿಕ, ಇಸ್ರೇಲ್ ಮಿತ್ರಕೂಟದ ಮುಖ್ಯ ಗುರಿ ಇರಾನ್ ಎಂದು ಬಿಂಬಿತವಾಗಿದ್ದರೂ, ಲೆಬನಾನ್​ನಲ್ಲಿ ಹೆಚ್ಚು ಜನ (3593) ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್​ನಲ್ಲಿ 3468 ಜನ ಸಾವಿಗೀಡಾಗಿದ್ದ್ದು, 26500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್ ನಡೆಸಿದ ದಾಳಿಗಳಲ್ಲಿ ಇಸ್ರೇಲ್​ನ 26 ನಾಗರಿಕರು, ಅಮೆರಿಕದ ಮಿಲಿಟರಿಯ 13 ಸೈನಿಕರು, ಯುಎಇಯ 12, ಕುವೈತ್​ನ 7, ಸೌದಿ ಅರೇಬಿಯಾದ 3, ಬಹ್ರೇನ್​ನ 3 ಮತ್ತು ಒಮಾನ್​ನ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ, ಜೋರ್ಡಾನ್, ಇರಾಕ್, ಸಿರಿಯಾಗಳಲ್ಲೂ ಸಾವುನೋವು ಸಂಭವಿಸಿವೆ. ಯುದ್ಧ ಭೂಮಿಯಲ್ಲಿ ಈಗಲೂ ದಾಳಿಗಳು ನಡೆಯುತ್ತಲೇ ಇರುವುದರಿಂದ ಈ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ದಿನಕ್ಕೆ 100 ನೌಕೆಗಳಿಂದ ಕೇವಲ 7ಕ್ಕೆ ಕುಸಿತ!

ಹೊಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಈಗಲೂ ಸಿಲುಕಿಕೊಂಡಿವೆ. ಫೆ. 28ರಿಂದ ಮೇ 31ರವರೆಗಿನ ಅವಧಿಯಲ್ಲಿ ಈ ಜಲಸಂಧಿಯ ಮೂಲಕ ಕೇವಲ 607 ಹಡಗುಗಳು ಮಾತ್ರ ಸಂಚರಿಸಿವೆ. ಅಂದರೆ ದಿನಕ್ಕೆ ಸರಾಸರಿ 7 ಹಡಗುಗಳು. ಮೊದಲು ಇಲ್ಲಿ ಪ್ರತಿದಿನ 100 ಹಡಗುಗಳು ಸಂಚರಿಸುತ್ತಿದ್ದವು. ಇದರ ನಡುವೆ, ಏಪ್ರಿಲ್​ನಿಂದ ಇರಾನ್​ನ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ಹೇರಿದ್ದು, ವಾಣಿಜ್ಯ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದೆ. ತೈಲ ನೌಕೆಗಳು ಜಲಸಂಧಿಯಿಂದ ಹೊರಬರಲು ಸಾಧ್ಯವಾಗದೆ ದೂರದ ದೀರ್ಘ ಮಾರ್ಗಗಳನ್ನು ಬಳಸುತ್ತಿವೆ. ಸರಕು ಸಾಗಣೆ ವೆಚ್ಚ ಗಗನಕ್ಕೇರಿದೆ. ಇದರಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದೆ.

146 ದೇಶಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ

ಕಳೆದ 3 ತಿಂಗಳಲ್ಲಿ ತೈಲ ಬೆಲೆಗಳು ದುಪ್ಪಟ್ಟಾಗಿವೆ. ಇದು ಇತಿಹಾಸದಲ್ಲೇ ಅತಿ ದೊಡ್ಡ ಅಡಚಣೆ ಎಂದು ಅಂತಾ ರಾಷ್ಟ್ರೀಯ ಇಂಧನ ಸಂಸ್ಥೆ (ಐಸಿಜಿ) ಬಣ್ಣಿಸಿದೆ. ಯುದ್ಧಕ್ಕೂ ಮುನ್ನ ಬ್ಯಾರೆಲ್​ಗೆ ಸುಮಾರು 70 ಡಾಲರ್ ಇದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ, 120 ಡಾಲರ್​ನ ಗಡಿ ತಲುಪಿ ಈಗ 100ರ ಆಸುಪಾಸಿನಲ್ಲಿ ಹೊಯ್ದಾಡುತ್ತಿದೆ. ಈ ಏರಿಳಿತಗಳಿಗೆ ಪ್ರಮುಖ ಕಾರಣ ಟ್ರಂಪ್ ಅವರ ‘ಟ್ರುತ್ ಸೋಶಿಯಲ್’ ಜಾಲತಾಣದ ಪೋಸ್ಟ್​ಗಳು. ಇದರ ನೇರ ಪರಿಣಾಮವಾಗಿ ಜಗತ್ತಿನ 146 ದೇಶಗಳಲ್ಲಿ ಪೆಟ್ರೋಲ್ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ತಮ್ಮ ತೈಲ ಅಗತ್ಯತೆಯ ಶೇ. 60ರಷ್ಟನ್ನು ಗಲ್ಪ್ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುವ ಏಷ್ಯಾ ದೇಶಗಳು ಅತಿ ಹೆಚ್ಚಿನ ಆರ್ಥಿಕ ಹೊರೆ ಎದುರಿಸುತ್ತಿವೆ. ಉದಾಹರಣೆಗೆ, ಮಯನ್ಮಾರ್​ನಲ್ಲಿ ಪೆಟ್ರೋಲ್ ಬೆಲೆ ಶೇ. 90ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ನೈಜೀರಿಯಾದಲ್ಲಿ ಶೇ. 50ಕ್ಕಿಂತ ಹೆಚ್ಚಾಗಿದೆ. ಪೆರುನಲ್ಲಿ ಶೇ. 40ರಷ್ಟು ದುಬಾರಿಯಾಗಿದೆ.

ಷೇರು ಮಾರುಕಟ್ಟೆಗಳ ಏರಿಳಿತ

ಯುದ್ಧದ ಆರಂಭದಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡವು. ಅಮೆರಿಕದ ಪ್ರಮುಖ ಸೂಚ್ಯಂಕವಾದ ಎಸ್​ಪಿ 500 ಮಾರ್ಚ್ ಅಂತ್ಯದ ವೇಳೆಗೆ ತನ್ನ ಗರಿಷ್ಠ ಮಟ್ಟದಿಂದ ಶೇ. 9.1ರಷ್ಟು ಕುಸಿಯಿತು. ಯುದ್ಧ ಮುಂದುವರಿದಂತೆ ಜಾಗತಿಕ ಷೇರು ಮಾರುಕಟ್ಟೆಗಳು ತೀವ್ರ ಏರಿಳಿತ ಕಂಡವು. ಯುದ್ಧದ ತೀವ್ರತೆ ಹಾಗೂ ಕದನ ವಿರಾಮದ ವದಂತಿಗಳ ಆಧಾರದ ಮೇಲೆ ಸೂಚ್ಯಂಕಗಳು ಕುಸಿಯುವುದು, ಚೇತರಿಸಿಕೊಳ್ಳುವುದು ಮುಂದುವರಿದಿದೆ. ಇದು ಮಾರುಕಟ್ಟೆಯ ಮ್ಯಾನಿಪ್ಯುಲೇಷನ್ (ತಿರುಚುವಿಕೆ) ಆರೋಪಗಳಿಗೂ ದಾರಿಮಾಡಿಕೊಟ್ಟಿದೆ. ಇಂಧನ ಅವಲಂಬಿತ ಕೈಗಾರಿಕೆಗಳನ್ನು ಹೊಂದಿರುವ ಯುರೋಪಿಯನ್ ಮಾರುಕಟ್ಟೆಗಳಾದ ಎಫ್​ಟಿಎಸ್​ಇ 100, ಯುರೋ ಸ್ಟಾಕ್ಸ್ 600 ಮತ್ತು ಜರ್ಮನಿಯ ಡ್ಯಾಕ್ಸ್ ಸೂಚ್ಯಂಕಗಳು ಮಾರ್ಚ್ ಆರಂಭದಲ್ಲಿ ತೀವ್ರ ಹೊಡೆತ ತಿಂದವು. ಗಲ್ಪ್ ರಾಷ್ಟ್ರಗಳ ತೈಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಏಷ್ಯಾದ ಮಾರುಕಟ್ಟೆಗಳು ಎಲ್ಲದಕ್ಕಿಂತ ಹೆಚ್ಚು ತೊಂದರೆಗೀಡಾದವು. ಜಪಾನ್​ನ ನಿಕ್ಕಿ ಸೂಚ್ಯಂಕ ಭಾರಿ ಏಕದಿನ ಕುಸಿತಗಳನ್ನು ಅನುಭವಿಸಿತು.

ಪರಸ್ಪರ ಅಪನಂಬಿಕೆ

ಟ್ರಂಪ್ ಅವರ ಯಾವುದೇ ಹೇಳಿಕೆಗಳನ್ನು ಇರಾನ್ ನಂಬುತ್ತಿಲ್ಲ. ಅಷ್ಟೇ ಏಕೆ, ಈಗ ಅಮೆರಿಕ ಮತ್ತು ಇಸ್ರೇಲ್ ನಡುವೆಯೇ ತೀವ್ರ ಅಪನಂಬಿಕೆ ಶುರುವಾಗಿದೆ. ಅಮೆರಿಕದ ಅಧಿಕಾರಿಗಳ ಪ್ರತಿಯೊಂದು ಚಲನವಲನಗಳ ಮೇಲೆ ಇಸ್ರೇಲ್ ಗೂಢಚಾರರು ಕಣ್ಣಿಡುತ್ತಿದ್ದಾರೆ ಎಂದು ಟ್ರಂಪ್​ಗೆ ಗುಮಾನಿ ಶುರುವಾಗಿದೆ. ಇರಾನ್ ಜತೆ ಕದನವಿರಾಮ ಘೊಷಿಸುವಾಗ ಅಥವಾ ಮಾತುಕತೆ ನಡೆಸುವಾಗ ತನ್ನ ಜತೆ ಅಮೆರಿಕದವರು ರ್ಚಚಿಸಲಿಲ್ಲ ಎಂದು ಇಸ್ರೇಲ್​ಗೆ ಕೋಪ. ಇಷ್ಟೆಲ್ಲದರ ನಡುವೆ, ಜೂನ್ 2ರ ಸಮೀಕ್ಷೆಗಳ ಪ್ರಕಾರ, ಅಮೆರಿಕದಲ್ಲಿ ಟ್ರಂಪ್ ಅವರ ಜನಪ್ರಿಯತೆಯ ರೇಟಿಂಗ್ ಶೇ. 40.3ಕ್ಕೆ ಕುಸಿದಿದೆ. ಶೇ. 57ರಷ್ಟು ಜನರು ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನಬಳಕೆ ವಸ್ತುಗಳ ಬೆಲೆ ಏರಿಕೆ

ಯುದ್ಧದಿಂದ ಉಂಟಾಗಿರುವ ತೈಲ ಮತ್ತು ಅನಿಲದ ಅಭಾವ ಕೇವಲ ಪೆಟ್ರೋಲ್ ಬೆಲೆ ಏರಿಕೆಗೆ ಸೀಮಿತವಾಗಿಲ್ಲ. ದಿನಬಳಕೆಯ ಸಾವಿರಾರು ವಸ್ತುಗಳ ತಯಾರಿಕೆಗೂ ತೈಲ ಮತ್ತು ಅನಿಲ ಪ್ರಮುಖ ಕಚ್ಚಾ ಪದಾರ್ಥಗಳಾಗಿವೆ. ಪ್ಲಾಸ್ಟಿಕ್ ಬಾಟಲಿಗಳು, ಆಹಾರ ಸಂಗ್ರಹಣೆ ಡಬ್ಬಿಗಳು, ಕಾಸ್ಮೆಟಿಕ್ಸ್, ಲಾಂಡ್ರಿ ಡಿಟರ್ಜೆಂಟ್​ಗಳು, ಪೇಂಟ್​ಗಳು, ಸಿಂಥೆಟಿಕ್ ರಬ್ಬರ್, ನೈಲಾನ್ ಬಟ್ಟೆ ಮುಂತಾದವುಗಳ ತಯಾರಿಕೆಗೆ ಇವು ಬೇಕೇ ಬೇಕು. ಅತ್ಯಂತ ಮುಖ್ಯವಾಗಿ, ಜಾಗತಿಕ ಆಹಾರ ಪೂರೈಕೆ ವ್ಯವಸ್ಥೆ ಕೂಡ ನೈಸರ್ಗಿಕ ಅನಿಲದಿಂದ ತಯಾರಾಗುವ ಯೂರಿಯಾ, ಅಮೋನಿಯಾ ಮತ್ತಿತರ ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತವಾಗಿದೆ. ಗೊಬ್ಬರದ ಬೆಲೆಯೂ ಏರಿಕೆಯಾಗಿದೆ. ಕೈಗಾರಿಕಾ ಮತ್ತು ಕೃಷಿ ಉತ್ಪಾದನಾ ವೆಚ್ಚ ಹೆಚ್ಚಿದೆ. ಸರಕು ಸಾಗಣೆಯ ವೆಚ್ಚ ಹೆಚ್ಚಾಗಿರುವುದು ಇಡೀ ಪೂರೈಕೆ ಸರಪಳಿ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರದ ಬೆಲೆಗಳು ವಿಪರೀತವಾಗಿ ಹೆಚ್ಚುತ್ತಿವೆ. ದೊಡ್ಡ ತೈಲ ಕಂಪನಿಗಳು ಸದ್ಯಕ್ಕೆ ಈ ಹೆಚ್ಚಿನ ಬೆಲೆಯಿಂದ ಲಾಭ ಗಳಿಸುತ್ತಿದ್ದರೂ, ಇಂಧನ ದರಗಳು ಹೀಗೆಯೇ ಮುಂದುವರಿದರೆ ಜಾಗತಿಕ ಆರ್ಥಿಕತೆ ಸಂಪೂರ್ಣ ಕುಸಿದು ತೀವ್ರ ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ಅಪಾಯವಿದೆ.

ಅರ್ಥ ಕಳೆದುಕೊಂಡ ಕದನವಿರಾಮ

ಯುದ್ಧವನ್ನು ಕೊನೆಗಾಣಿಸಲು ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಏಪ್ರಿಲ್ 8ರಂದು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೊಷಣೆಯಾಗಿ, ಹೊಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅನುವು ಮಾಡಿಕೊಡಲು ಇರಾನ್ ಒಪ್ಪಿಕೊಂಡಿತು. ಆದರೆ, ಒಪ್ಪಂದವಾದ ಕೆಲವೇ ಗಂಟೆಗಳಲ್ಲಿ ಲೆಬನಾನ್ ಮೇಲೆ ಇಸ್ರೇಲ್ 100ಕ್ಕೂ ಹೆಚ್ಚು ವೈಮಾನಿಕ ದಾಳಿ ನಡೆಸಿ, 250ಕ್ಕೂ ಹೆಚ್ಚು ಜನರ ಮಾರಣಹೋಮ ಮಾಡಿತು. ಏಪ್ರಿಲ್ 11-12 ರಂದು ಇಸ್ಲಾಮಾಬಾದ್​ನಲ್ಲಿ ನಡೆದ ಮಾತುಕತೆಗಳು ಉಭಯ ಬಣಗಳ ಹಠದಿಂದಾಗಿ ಮುರಿದುಬಿದ್ದವು. ಅಮೆರಿಕದ ನಿಲುವನ್ನು ಇರಾನ್ ತಿರಸ್ಕರಿಸಿದರೆ, ಇರಾನ್​ನ ಪ್ರಸ್ತಾವನೆಯನ್ನು ಟ್ರಂಪ್ ‘ಕಸ’ ಎಂದು ಬಣ್ಣಿಸಿ ತಳ್ಳಿಹಾಕಿದರು. ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನ ವಿಧಿಸಿದರು.

ಭಾರತದ ಮೇಲೇನು ಪರಿಣಾಮ?

ಈ ಯುದ್ಧವು ಭಾರತದ ಆರ್ಥಿಕತೆ ಮೇಲೆ ನೇರ ಹಾಗೂ ತೀವ್ರ ಪರಿಣಾಮ ಬೀರಿದೆ. ಭಾರತ ತನ್ನ ಕಚ್ಚಾ ತೈಲದ ಅಗತ್ಯತೆಯ ಬಹುಪಾಲು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್​ಗೆ 100 ಡಾಲರ್ ದಾಟಿರುವುದರಿಂದ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಣನೀಯವಾಗಿ ಹೆಚ್ಚಾಗಿವೆ. ಇದರಿಂದ ದೇಶದ ಸರಕು ಸಾಗಣೆ ವೆಚ್ಚ ಹೆಚ್ಚುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಹಾಗೂ ಹಣದುಬ್ಬರಕ್ಕೆ ಇದು ದಾರಿ ಮಾಡಿಕೊಡುತ್ತಿದೆ. ರಾಸಾಯನಿಕ ಗೊಬ್ಬರಗಳ ಆಮದು ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಭಾರತದ ಕೃಷಿ ಪ್ರಧಾನ ಆರ್ಥಿಕತೆಗೆ ಇದರಿಂದ ಪೆಟ್ಟು ಬೀಳಲಿದೆ. ಕೃಷಿ ವೆಚ್ಚ ಹೆಚ್ಚಾಗಿ, ಆಹಾರ ಧಾನ್ಯಗಳ ಬೆಲೆ ಏರಿಕೆಗೂ ದಾರಿ ಮಾಡಿಕೊಡಬಹುದು. ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕೂಡ ತೀವ್ರ ಏರಿಳಿತ ಕಾಣುತ್ತಿವೆ. ದೇಶದ ಜಿಡಿಪಿ ಬೆಳವಣಿಗೆಯ ವೇಗಕ್ಕೆ ಈ ಯುದ್ಧ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net