10 ನಿಮಿಷಗಳಲ್ಲಿ 100 ದಾಳಿ! ಇರಾನ್ ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ಅಟ್ಟಹಾಸ! Israel Attacks Lebanon

10 ನಿಮಿಷಗಳಲ್ಲಿ 100 ದಾಳಿ! ಇರಾನ್ ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ಅಟ್ಟಹಾಸ!
10 ನಿಮಿಷಗಳಲ್ಲಿ 100 ದಾಳಿ! ಇರಾನ್ ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ಅಟ್ಟಹಾಸ!
Published on
ಬೆೈರೂಟ್: ಅತ್ತ ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿ ಜಗತ್ತು ನಿಟ್ಟುಸಿರು ಬಿಡುತ್ತಿದ್ದ ಬೆನ್ನಲ್ಲೇ, ಇತ್ತ ಇಸ್ರೇಲ್(Israel Attacks Lebanon) ರಣಭೀಕರ ರೂಪ ತಾಳಿದೆ. ಬುಧವಾರ ಕೇವಲ 10 ನಿಮಿಷಗಳ ಅಂತರದಲ್ಲಿ ಲೆಬನಾನ್‌ನ 100ಕ್ಕೂ ಹೆಚ್ಚು ಗುರಿಗಳ ಮೇಲೆ ಇಸ್ರೇಲ್ ವಾಯುಪಡೆ ಭೀಕರ ಬಾಂಬ್ ದಾಳಿ ನಡೆಸಿದೆ. ಈ ಭೀಕರ ದಾಳಿಯು ಬೆೈರೂಟ್ ರಾಜಧಾನಿಯನ್ನು ನಡುಗಿಸಿದ್ದು, ಇಡೀ ನಗರ ಕಪ್ಪು ಹೊಗೆಯಿಂದ ಆವೃತವಾಗಿದೆ.

10 ನಿಮಿಷಗಳ ಮೃತ್ಯು ನರ್ತನ

ಇಸ್ರೇಲ್ ಸೇನೆಯು ಈ ಯುದ್ಧದ ಅತ್ಯಂತ ದೊಡ್ಡ ಸಂಘಟಿತ ದಾಳಿಯನ್ನು ಬುಧವಾರ ನಡೆಸಿತು. ಬೆೈರೂಟ್‌ನ ಮಧ್ಯಭಾಗ, ದಕ್ಷಿಣ ಲೆಬನಾನ್ ಮತ್ತು ಪೂರ್ವ ಬೆಕಾವಾ ಕಣಿವೆಯ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಯಾವುದೇ ಮುನ್ಸೂಚನೆ ನೀಡದೆ ಬಾಂಬ್‌ಗಳ ಮಳೆ ಸುರಿಸಲಾಗಿದೆ.
ದಾಳಿಯ ತೀವ್ರತೆ:
ಕೇವಲ 10 ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿಗಳು ನಡೆದವು.
ವಸತಿ ಸಂಕೀರ್ಣಗಳು ಮತ್ತು ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆ ಪ್ರದೇಶಗಳು ನೆಲಸಮವಾಗಿವೆ.
ಸುಟ್ಟು ಕರಕಲಾದ ವಾಹನಗಳು ಮತ್ತು ಧ್ವಂಸಗೊಂಡ ಕಟ್ಟಡಗಳ ಅಡಿಯಲ್ಲಿ ನೂರಾರು ಜನರು ಸಿಲುಕಿರುವ ಭೀತಿ ಎದುರಾಗಿದೆ.

ಇರಾನ್ ಕದನ ವಿರಾಮ ಲೆಬನಾನ್‌ಗೆ ಅನ್ವಯಿಸುವುದಿಲ್ಲ: ನೆತನ್ಯಾಹು

ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವು ಲೆಬನಾನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಲೆಬನಾನ್‌ನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ಈ ಕದನ ವಿರಾಮವು ಲೆಬನಾನ್ ಅಥವಾ ಹಿಜ್ಬುಲ್ಲಾವನ್ನು ಒಳಗೊಂಡಿಲ್ಲ ಎಂದು ಇಸ್ರೇಲ್ ಸೇನೆಯ ವಕ್ತಾರ ಅವಿಚಾಯ್ ಅದ್ರೇಯ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇಸ್ರೇಲ್ ಪ್ರಕಾರ, ಹಿಜ್ಬುಲ್ಲಾ ಉಗ್ರರು ನಾಗರಿಕ ಪ್ರದೇಶಗಳನ್ನು ಗುರಾಣಿಯನ್ನಾಗಿ ಬಳಸಿಕೊಂಡು ಕ್ಷಿಪಣಿ ಲಾಂಚರ್‌ಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ನಡೆಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಅನಿವಾರ್ಯ ಎಂದು ಇಸ್ರೇಲ್ ಪ್ರತಿಪಾದಿಸಿದೆ.

ರಕ್ತಸಿಕ್ತ ಬೆೈರೂಟ್: ಸಾವು-ನೋವಿನ ಆಕ್ರಂದನ

ದಾಳಿಯ ತೀವ್ರತೆಗೆ ಆಂಬ್ಯುಲೆನ್ಸ್‌ಗಳು ಸತತವಾಗಿ ಧಾವಿಸುತ್ತಿದ್ದು, ತುರ್ತು ಸೇವಾ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾರ್ಚ್ 2 ರಿಂದ ಇಲ್ಲಿಯವರೆಗೆ ಲೆಬನಾನ್‌ನಲ್ಲಿ 1,530ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಮತ್ತು 130ಕ್ಕೂ ಹೆಚ್ಚು ಮಕ್ಕಳು ಸೇರಿರುವುದು ಪರಿಸ್ಥಿತಿಯ ಗಾಂಭೀರ್ಯವನ್ನು ತಿಳಿಸುತ್ತದೆ.
ದಾಳಿಯ ಸಮಯದಲ್ಲಿ ಬೆೈರೂಟ್‌ನ ಮಧ್ಯಭಾಗದಲ್ಲಿರುವ ಅಪಾರ್ಟ್ಮೆಂಟ್ ಒಂದಕ್ಕೆ ನೇರವಾಗಿ ಕ್ಷಿಪಣಿ ಬಿದ್ದಿದ್ದು, ಹತ್ತಾರು ಕುಟುಂಬಗಳು ಜೀವಂತ ಸಮಾಧಿಯಾಗಿರುವ ಸಾಧ್ಯತೆಯಿದೆ.

ನಿರಾಶ್ರಿತರ ನರಕಯಾತನೆ: ಮನೆಗೆ ಮರಳುವ ಕನಸು ಭಗ್ನ

ಬುಧವಾರ ಬೆಳಿಗ್ಗೆ ಇರಾನ್ ಕದನ ವಿರಾಮದ ಸುದ್ದಿ ಕೇಳಿ, ಸಾವಿರಾರು ನಿರಾಶ್ರಿತ ಕುಟುಂಬಗಳು ಬೆೈರೂಟ್ ಮತ್ತು ಸಿಡಾನ್‌ನ ಟೆಂಟ್‌ಗಳಿಂದ ಹೊರಬಂದು ತಮ್ಮ ಮನೆಗಳಿಗೆ ಮರಳಲು ಸಿದ್ಧತೆ ನಡೆಸಿದ್ದವು. ಆದರೆ, ಮಧ್ಯಾಹ್ನವಾಗುವಷ್ಟರಲ್ಲಿ ನಡೆದ ಈ ಭೀಕರ ದಾಳಿ ಅವರ ಕನಸನ್ನು ನುಚ್ಚುನೂರು ಮಾಡಿದೆ.
ನಾವು ಇನ್ನು ಮುಂದೆ ಟೆಂಟ್‌ನಲ್ಲಿ ಮಲಗಲು ಸಾಧ್ಯವಿಲ್ಲ, ಸ್ನಾನವಿಲ್ಲ, ಅನಿಶ್ಚಿತತೆ ನಮ್ಮನ್ನು ಕಾಡುತ್ತಿದೆ. ಆದರೆ ಈಗ ಮನೆಗೆ ಹೋದರೆ ನಾವು ಇಸ್ರೇಲ್‌ನ ಗುರಿಯಾಗುತ್ತೇವೆ ಎಂದು 35 ವರ್ಷದ ಫಾದಿ ಝೈದಾನ್ ಎಂಬ ಸಂತ್ರಸ್ತ ಆಳಲು ತೋಡಿಕೊಂಡಿದ್ದಾರೆ. ಸದ್ಯ 10 ಲಕ್ಷಕ್ಕೂ ಹೆಚ್ಚು ಜನರು ಲೆಬನಾನ್‌ನಲ್ಲಿ ನಿರಾಶ್ರಿತರಾಗಿದ್ದಾರೆ.

ಜಾಗತಿಕ ಕಳವಳ

ಇರಾನ್ ಜೊತೆಗಿನ ಯುದ್ಧ ನಿಂತರೂ, ಲೆಬನಾನ್‌ನಲ್ಲಿ ಇಸ್ರೇಲ್‌ನ ಈ ಆಕ್ರಮಣಕಾರಿ ಧೋರಣೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಬಿಗುವಿನ ವಾತಾವರಣ ಸೃಷ್ಟಿಸಿದೆ. ಹಿಜ್ಬುಲ್ಲಾ ಈ ದಾಳಿಗೆ ಮರುದಾಳಿ ನಡೆಸುವ ಸಾಧ್ಯತೆಯಿದ್ದು, ಕದನ ವಿರಾಮವು ಕೇವಲ ಕಾಗದದ ಮೇಲೆ ಉಳಿಯುವ ಭೀತಿ ಎದುರಾಗಿದೆ.
ಇರಾನ್ ಜೊತೆಗಿನ ಶಾಂತಿ ಒಪ್ಪಂದವು ಲೆಬನಾನ್‌ಗೆ ಸಾವಿನ ಮುನ್ಸೂಚನೆಯನ್ನು ಹೊತ್ತು ತಂದಿದೆ. ಇಸ್ರೇಲ್‌ನ '10 ನಿಮಿಷಗಳ ನೂರು ದಾಳಿ' ಇಡೀ ದೇಶವನ್ನು ಹೈರಾಣಾಗಿಸಿದ್ದು, ಯುದ್ಧದ ಬಿಸಿ ಇನ್ನೂ ಆರಿಲ್ಲ ಎಂಬುದು ಸಾಬೀತಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net