

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕೃಷಿ ಭಾಗ್ಯ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದ್ದು, ಅ.14ರಂದು ಇಟಲಿಯ ರೋಮ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವರದಿ ಮಂಡನೆಗೆ ಅವಕಾಶ ಲಭಿಸಿದೆ.
ಆಹಾರ ಮತ್ತು ಕೃಷಿ ಸಂಸ್ಥೆಯ 80ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಈ ವೇಳೆ ಸಮಗ್ರ ಭೂಮಿ, ಮಣ್ಣು ಮತ್ತು ನೀರು ನಿರ್ವಹಣಾ/ಸಂರಕ್ಷಣಾ ವಿಭಾಗಗಳಲ್ಲಿ ಉತ್ತಮ ಮತ್ತು ವಿನೂತನ ಪದ್ಧತಿಗಳಿಗೆ ತಾಂತ್ರಿಕ ಮನ್ನಣೆ ಪ್ರಶಸ್ತಿ ನೀಡಲಾಗುತ್ತದೆ. ಸದಸ್ಯ ರಾಷ್ಟ್ರಗಳು ಅನುಷ್ಠಾನಗೊಳಿಸಿರುವ ಒಂದು ಯೋಜನೆಯ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಅದರಂತೆ ರಾಜ್ಯದಿಂದ ಕೃಷಿ ಭಾಗ್ಯ ಯೋಜನೆಯ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ನೀರು ನಿರ್ವಹಣೆ ವಿಭಾಗದಲ್ಲಿ ಭಾರತದಿಂದ ಕರ್ನಾಟಕದ ಕೃಷಿ ಭಾಗ್ಯ ಯೋಜನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆ ಆಗಿದೆ. ಯೋಜನೆ ಕುರಿತು ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಇಟಲಿಯ ರೋಮ್‌ನಲ್ಲಿ ವರದಿ ಮಂಡನೆ ಮಾಡಲಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.