

ಬೆಂಗಳೂರು: ‘ನನ್ನ ಮತ ನನ್ನ ಹಕ್ಕು’ ೋಷವಾಕ್ಯದಡಿ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಕಾರ್ಯಕ್ರಮವು ಈ ಬಾರಿ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ 15ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಗೌರವಾನ್ವಿತರಾಗಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಭಾಗವಹಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಜರಿರಲಿದ್ದು, ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆವಹಿಸುವರು.
ರಾಜ್ಯಾದ್ಯಂತ ಅದೇ ದಿನ ಪ್ರಜಾಪ್ರಭುತ್ವದ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲಾ ಆಡಳಿತದಿಂದ ಸೈಕಲ್ ಜಾಥಾ, ರಾಜ್ಯ, ಜಿಲ್ಲಾ, ತಾಲೂಕುಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ, ಛಾಯಾಚಿತ್ರ ಸ್ಪರ್ಧೆಗಳು, ಸರ್ಕಾರಿ ಕಚೇರಿಗಳು, ಸಮುದಾಯದ ಸ್ಥಳಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ವಿವರಿಸಿದರು.
ಯುವ ಸಮೂಹದಲ್ಲಿ ಮತದಾನದ ಜಾಗೃತಿ, ನಾಗರಿಕರ ಪಾಲ್ಗೊಳ್ಳುವರಿಕೆಗೆ ಉತ್ತೇಜನ, ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವುದು ಪ್ರಜಾಪ್ರಭುತ್ವ ದಿನಾಚರಣೆ ಉದ್ದೇಶವಾಗಿದೆ ಎಂದು ಹೇಳಿದರು.
ಚರ್ಚೆಗಳು, ಸಂಗೀತ ಮತ್ತು ಯುವಧ್ವನಿಗಳ ಮೂಲಕ ಸಂವಿಧಾನ ಕುರಿತು ಸಂದೇಶ ನೀಡಲು ‘ಡೆಮಾಕ್ರಸಿ ರೇಡಿಯೋ’ ಎಂಬ ಅಂತರ್ಜಾಲ ಆಧಾರಿತ ರೇಡಿಯೋ ವೇದಿಕೆಗೆ ಚಾಲನೆ ನೀಡಲಾಗುವುದು.
ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಪರಿಶಿಷ್ಟ ಜಾತಿ ಯುವಕರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕೆನೆಟ್, ನೀಟ್, ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಗಳಿಸಿ ಇಂಜಿನಿಯರ್ ಹಾಗೂ ವೈದ್ಯಕೀಯ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದ ಒಂದು ಸಾವಿರ ಪ್ರತಿಭಾವಂತ ಕೆಆರ್‌ಇಐಎಸ್ ಪಿಯು ವಿದ್ಯಾರ್ಥಿಗಳಿಗೆ
ಪ್ರೋತ್ಸಾಹಧನ ವಿತರಿಸಲಿದ್ದು, ಒಟ್ಟು ಆರು ಕೋಟಿ ರೂ. ನೇರ ನಗದು ವರ್ಗಾವಣೆಯಾಗಲಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.