

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಫೆ.27ರಂದು ಉದ್ಘಾಟನೆಗೊಂಡ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ವಿಮಾನಯಾನ ಸೇವೆ ಆರಂಭಗೊಂಡಿದೆ. ಜನವರಿಗೆ 15ರೊಳಗೆ ರಾತ್ರಿಯಲ್ಲೂ ವಿಮಾನ ಇಳಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ವಿಮಾನ ಹಾರಾಟ ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. 5 ಸಾವಿರ ಅಡಿಯಿಂದ ಕೆಳಗೆ ಕಾಣಿಸಲು ಅಗತ್ಯವಾಗಿ ಬೇಕಾಗಿದ್ದ ಉಪಕರಣಗಳು ಅಳವಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಮುಂದಿನ 15 ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಮತ್ತು ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರು ಅಧಿಕೃತಗೊಳ್ಳಲಿದೆ. ಇತ್ತೀಚೆಗೆ ರಾಜ್ಯ ಅಧಿವೇಶನದಲ್ಲಿ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೆಸರು ನಾಮಕರಣ ಸಂಬಂಧ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. 15 ದಿನಗಳಲ್ಲಿ ದೆಹಲಿಯಿಂದ ಕ್ಲಿಯರೆನ್ಸ್ ಸಿಗಲಿದೆ. ಹಾಗಾಗಿ ವಿಮಾನ ನಿಲ್ದಾಣದ ಜತೆಗೆ ರೈಲ್ವೆ ನಿಲ್ದಾಣಕ್ಕೂ ಅಧಿಕೃತವಾಗಿ ಹೆಸರು ನಾಮಕರಣಗೊಳ್ಳಲಿದೆ ಎಂದರು.