

ಈ ವರ್ಷದ ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತದ ಆರಂಭದಲ್ಲೇ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡರು. ಇದಕ್ಕೆ ಒಂದಿಷ್ಟು ಪ್ರತಿರೋಧ ಬಂದರೂ, ‘ಅಕ್ರಮ ವಲಸಿಗರಿಗೆ ದಯೆ ತೋರುವುದಿಲ್ಲ’ ಎಂದು ಟ್ರಂಪ್ ಕಡ್ಡಿ ಮುರಿದಂತೆ ಸ್ಪಷ್ಟವಾಗಿ ಹೇಳಿದರು.
ಭಾರತ ಸಹ ಅಕ್ರಮ ವಲಸಿಗರ ಸಮಸ್ಯೆಯಿಂದ ದೊಡ್ಡ ತಲೆನೋವು ಅನುಭವಿಸುತ್ತಿದೆ. ಬಾಂಗ್ಲಾದೇಶ, ಮ್ಯಾನ್ಮಾರ್, ಆಫ್ರಿಕಾ ಸೇರಿ ಹಲವು ರಾಷ್ಟ್ರಗಳಿಂದ ಅಕ್ರಮವಾಗಿ ವಲಸೆ ಬಂದು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ದೇಶದ ಆಂತರಿಕ ಸುರಕ್ಷಗೆ ಸವಾಲಾಗಿ ಪರಿಣಮಿಸಿದ್ದಾರೆ.
ರೋಹಿಂಗ್ಯಾಗಳ ಉಟಪಳವಂತೂ ಎಲ್ಲೆ ಮೀರಿದೆ. ಆದರೆ, ಅಕ್ರಮ ವಲಸೆಯನ್ನು ತಡೆಯುವ ಮತ್ತು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪರಿಣಾಮಕಾರಿ ಕಾನೂನು ಭಾರತದಲ್ಲಿ ಇರಲಿಲ್ಲ. ಈಗ ಈ ಕೊರತೆ ದೂರವಾಗುತ್ತಿದೆ.
ಮಾರ್ಚ್ 11ರಂದು ಲೋಕಸಭೆಯಲ್ಲಿ ಮಂಡಿಸಲಾದ ‘ವಲಸೆ ಮತ್ತು ವಿದೇಶಿಗರ ಮಸೂದೆ 2025’ಕ್ಕೆ (‘ಇಮಿಗ್ರೇಶನ್ ಆಂಡ್ ಫಾರನರ್ಸ್ ಬಿಲ್ 2025’) ಗುರುವಾರ ಲೋಕಸಭೆ ಅನುಮೋದನೆ ನೀಡಿದೆ. ಆಡಳಿತ ಮತ್ತು ಪ್ರತಿಪಕ್ಷದ 30 ಸಂಸದರು ಈ ಮಸೂದೆ ಬಗ್ಗೆ ಮಾತನಾಡಿದ್ದಾರೆ. ‘ಭಾರತದ ಹಿತಕ್ಕೆ ಧಕ್ಕೆ ಒದಗಿಸುವ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಳ್ಳೆಯ ಉದ್ದೇಶ ಮತ್ತು ಇಲ್ಲಿನ ಅಭಿವೃದ್ಧಿಗೆ ಸಹಕರಿಸುವ ವಲಸಿಗರಿಗೆ ಸದಾ ಸ್ವಾಗತವಿರುತ್ತದೆ. ಆದರೆ, ದೇಶದ ಭದ್ರತೆಗೆ ಅಪಾಯ ಸೃಷ್ಟಿಸುವವರನ್ನು ಸಹಿಸುವುದಿಲ್ಲ. ಭಾರತವೇನೂ ಧರ್ಮಛತ್ರವಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟವಾಗಿ ಹೇಳಿದ್ದಾರೆ.
ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ನಕಲಿ ಪಾಸ್ಪೋರ್ಟ್ ಅಥವಾ ನಕಲಿ ದಾಖಲೆಗಳ ಮೂಲಕ ಭಾರತ ಪ್ರವೇಶಿಸಿದ್ದಲ್ಲಿ ಅಂಥ ಅಕ್ರಮ ವಲಸಿಗನಿಗೆ 5 ಲಕ್ಷ ರೂಪಾಯಿ ದಂಡ ಹಾಗೂ 5 ವರ್ಷ ಜೈಲು ಶಿಕ್ಷೆಯಾಗಲಿದೆ. ತಪು್ಪ ಮಾಹಿತಿ ನೀಡಿದ್ದಲ್ಲಿ ಅಥವಾ ದಾಖಲೆಗಳನ್ನು ತಿರುಚಿದ್ದಲ್ಲಿ ಮೂರು ವರ್ಷ ಜೈಲು, ಮೂರು ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ವಿದೇಶದಿಂದ ಬರುವವರ ನೋಂದಣಿ ಕಡ್ಡಾಯವಾಗಲಿದೆ. ಮತ್ತು ದೇಶದ ಎಲ್ಲಾ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿಗರ ಪಟ್ಟಿಯನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತದೆ. ವಿಮಾನ ನಿಲ್ದಾಣ ಮತ್ತು ಜಲಮಾರ್ಗ ಹೊರತುಪಡಿಸಿ ಇತರ ಮಾರ್ಗದಿಂದ ಬಂದಲ್ಲಿ ಹಲವು ಆಯಾಮದಲ್ಲಿ ತನಿಖೆಯನ್ನು ಎದುರಿಸಬೇಕಾಗುತ್ತದೆ.
ಪಶ್ಚಿಮ ಬಂಗಾಳದಲ್ಲಂತೂ ಅಕ್ರಮ ವಲಸಿಗರ ಉಪಟಳ ಜೋರಾಗಿದೆ. ಮಾತ್ರವಲ್ಲ, ಅಲ್ಲಿನ ಸ್ಥಳೀಯ ಆಡಳಿತಗಳು ಮತ್ತು ಮಧ್ಯವರ್ತಿಗಳು ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ನಾಗರಿಕತ್ವದ ಹಲವು ದಾಖಲೆಗಳನ್ನು ಮಾಡಿಸಿಕೊಟ್ಟಿವೆ.
ಇಂಥವರ ವಿರುದ್ಧವೂ ಕ್ರಮ ಅಗತ್ಯ. ದೇಶದಲ್ಲಿ ಮಾದಕದ್ರವ್ಯ ಜಾಲ ಹಾಗೂ ಮಾನವ ಕಳ್ಳಸಾಗಾಣಿಕೆ ಹೆಚ್ಚುವಲ್ಲಿ ಕೂಡ ಅಕ್ರಮ ವಲಸಿಗರ ಕೈವಾಡವಿದೆ. ಹೀಗಾಗಿ, ಪ್ರಸ್ತುತ ಮಸೂದೆ ಕಾನೂನಿನ ರೂಪ ಪಡೆದು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಅಕ್ರಮ ವಲಸಿಗರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಾಗ ಮಾತ್ರ ಭಾರತ ಸುರಕ್ಷಿತವಾಗಿರಲು ಸಾಧ್ಯ.