

ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಸೂತ್ರವನ್ನು ಮರು ಪರಿಶೀಲಿಸಿ, ನೈಜ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನ್‌ದಾಸ್ ಅಥವಾ ಜೆ.ಸಿ.ಮಾಧುಸ್ವಾಮಿ ನೇತೃತ್ವದ ವರದಿಯನ್ನು ಒಪ್ಪಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕು ಎಂದರು.
ರಾಜ್ಯ ಸರ್ಕಾರದ ನಿರ್ಧಾರದಿಂದ ಅಲೆಮಾರಿ ಗುಂಪುಗಳಿಗೆ ಅನ್ಯಾಯವಾಗಿದೆ. ಬೆಂಗಳೂರು ಸೇರಿ ನಾಳೆ ಇಡೀ ರಾಜ್ಯದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಮಾನರು- ಅಸಮಾನರನ್ನು ಒಂದೇ ಪ್ರವರ್ಗದಲ್ಲಿ ತರಬಾರದೆಂಬ ಸುಪ್ರೀಂ ಕೋರ್ಟಿನ ಸೂಚನೆ ಪಾಲಿಸಿಲ್ಲ. ನಾಗಮೋಹನ್‌ದಾಸ್ ಅವರ ವರದಿಯನ್ನೂ ಪರಿಗಣಿಸಿಲ್ಲ. ರಾಜಕೀಯ ತೇಪೆ ಹಚ್ಚುವ ವರ್ಗೀಕರಣ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ಆರೋಪಿಸಿದರು.
ಒತ್ತಡಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ರಾಜಕೀಯ ತೀರ್ಮಾನವನ್ನು ಯಾವುದೇ ಕಾರಣಕ್ಕೆ ಒಪ್ಪಲಾಗದು. ಸಾಮಾಜಿಕ ನ್ಯಾಯ ಮಣ್ಣು ಪಾಲು ಮಾಡಿ ರಾಜಕೀಯ ಲಾಭಕ್ಕಾಗಿ ವರ್ಗೀಕರಣ ಮಾಡಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ತರಾತುರಿಯಲ್ಲಿ ನೇಮಕಾತಿ ಪ್ರಾರಂಭಿಸಿದೆ. ಕೆಪಿಎಸ್ಸಿಗೂ ನಿರ್ದೇಶನ ನೀಡಿದ್ದು, ನೇಮಕಾತಿ ಪ್ರಕ್ರಿಯೆಗಳು ಈ ಗೊಂದಲದ ನಡುವೆ ಪ್ರಾರಂಭವಾಗಿದೆ ಎಂದರು. ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ, ಉದ್ಯೋಗ, ಶಿಕ್ಷಣದ ಜತೆಗೆ ಅನುದಾನಕ್ಕೂ ಈ ಆದೇಶ ಅನ್ವಯ ಆಗುವಂತೆ ಮಾರ್ಪಾಡು ಮಾಡಬೇಕೆಂದು ಒತ್ತಾಯಿಸಿದರು.
ಸರ್ವ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳ ವಿಶೇಷ ಸಭೆ ಕರೆಯಬೇಕು. ಈ ಸಭೆಗೆ ಮೀಸಲಾತಿಯ ಜ್ಞಾನ ಇರುವವರು, ನಿವೃತ್ತ ಅಧಿಕಾರಿಗಳನ್ನೂ ಆಹ್ವಾನಿಸಿ ತೀರ್ಮಾನಿಸಿದರೆ ಎಲ್ಲರಿಗೂ ಒಪ್ಪಿಗೆ ಆಗಲಿದೆ ಎಂದು ಗೋವಿಂದ ಕಾರಜೋಳ ಸಲಹೆ ನೀಡಿದರು.
ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಮಾಡಿದ ಮೀಸಲು ವರ್ಗೀಕರಣ ಸರಿಯಿಲ್ಲವೆಂದು ನಾಗಮೋಹನ್‌ದಾಸ್ ಅವರಿಂದ ವರದಿ ತರಿಸಿಕೊಂಡು ಅದನ್ನು ಕೈಬಿಟ್ಟು ಅವರಿಗೂ ಅವಮಾನಿಸಿ, ಬೊಕ್ಕಸಕ್ಕೆ 150 ಕೋಟಿ ರೂ. ಹಾನಿ ಕೆಲಸವನ್ನು ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ ಎಂದು ದೂಷಿಸಿದರು.
ಸಚಿವ ಸಂಪುಟದ ಸಭೆಗೆ ಹಿಂದಿನ ದಿನ ಗೃಹ ಸಚಿವ ಡಾ.ಪರಮೇಶ್ವರ್ ಮನೆಯಲ್ಲಿ ಇಡೀ ರಾತ್ರಿ ಸಭೆ ಮಾಡಿ ಈ ಖಾಜಿ ನ್ಯಾಯ ಮಾಡಿದರು. ಡಾ. ಪರಮೇಶ್ವರ್, ಶಿವರಾಜ ತಂಗಡಗಿ, ಎಚ್.ಸಿ.ಮಹದೇವಪ್ಪ ತೃಪ್ತಿ ಪಟ್ಟಿದ್ದಾರೆಂದು ಸಚಿವ ಸಂಪುಟದ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸುವಾಗ ಎಚ್.ಕೆ.ಪಾಟೀಲ ಹೇಳಿದ್ದು, ಕ್ಯಾಬಿನೆಟ್‌ನ ಈ ನಿರ್ಧಾರ ಒಪ್ಪಲು ಸಾಧ್ಯವಿಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು.
ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ ಒಳ ಮೀಸಲಾತಿಯು ದಿಕ್ಕುದೆಸೆಯಿಲ್ಲದ್ದು, ಅರ್ಥಹೀನವಾಗಿದೆ. ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಮಂಕುಬೂದಿ ಎರಚಲಾಗಿದೆ ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಆದೇಶ, ನ್ಯಾ.ನಾಗಮೋಹನ್‌ದಾಸ್ ವರದಿಯನ್ನು ಸಿಎಂ ಸಿದ್ದರಾಮಯ್ಯ ಧಿಕ್ಕರಿಸಿದ್ದಾರೆ. ಸೆ.4ರ ಸಚಿವ ಸಂಪುಟ ಸಭೆಯಲ್ಲಿ ದೋಷಮುಕ್ತ ವರ್ಗೀಕರಣ ಸೂತ್ರವನ್ನು ಸರಿಪಡಿದಿದ್ದರೆ ಮತ್ತೊಮ್ಮೆ ಮಾದಿಗರ ಚಳವಳಿ ಆರಂಭವಾಗಲಿದೆ ಎಂದು ಎ.ನಾರಾಯಣಸ್ವಾಮಿ ಎಚ್ಚರಿಸಿದರು.