ಒಳ ಮೀಸಲಾತಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಆ.1ರಂದು ಪ್ರತಿಭಟನೆ

CTD MP GOVINDA KARAJOLA----
Published on

ಬೆಂಗಳೂರು:

ಮೂರೂವರೆ ದಶಕಗಳಿಂದ ಮಾದಿಗರು ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡಿದ್ದರೂ ಸರ್ಕಾರ ಸ್ಪಂಧಿಸಿಲ್ಲ. ಆದ್ದರಿಂದ ಆ.1ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಮಾದಿಗರ ಸಂಘಟನೆಗಳು ತೀರ್ಮಾನಿಸಿವೆ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಿನ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ, ಸದನಕ್ಕೆ ಮಂಡಿಸದಿದ್ದರೆ, ರಾಜ್ಯ ಬಂದ್‌ಗೆ ಕರೆ ನೀಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ನ್ಯಾಯಮೂರ್ತಿ ಚಂದ್ರಚೂಡ ಅವರು ತೀರ್ಪು ಕೊಟ್ಟು ಆ.1ಕ್ಕೆ ಒಂದು ವರ್ಷ ಆಗಲಿದೆ. ಆದರೂ ಈ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಳ್ಳಲು ಮೀನಾ ಮೇಷ ಎಣಿಸುತ್ತಿದೆ. ಆ.10ರೊಳಗಾಗಿ ಈ ಬಗ್ಗೆ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಸ್ಪಂದಿಸದೆ ಇದ್ದರೆ, ನಾಲ್ಕೈದು ಸಾವಿರ ಜನರ ಜತೆ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಅಸಹಕಾರ ಚಳವಳಿಯನ್ನು ಸಂಘಟಿಸುತ್ತೇವೆ ಎಂದರು.

ತೆಲಂಗಾಣದಲ್ಲಿ ಮಾದಿಗರಿಗೆ 1999ರಲ್ಲಿ ಒಳ ಮೀಸಲಾತಿ ಜಾರಿ ಮಾಡಿದ್ದರು. ನಂತರ 2004ರಲ್ಲಿ ಅಲ್ಲಿನ ಹೈಕೋರ್ಟ್ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದಿತ್ತು. ಕಾಂಗ್ರೆಸ್ ಪಕ್ಷ, ಒಳ ಮೀಸಲಾತಿ ಅವಶ್ಯಕತೆ ಇಲ್ಲವೆಂದು ಅವಕಾಶ ನಿರಾಕರಿಸಿತ್ತು ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಶೋಷಿತರಲ್ಲಿ ಶೋಷಿತರು, ವಂಚಿತರಲ್ಲಿ ವಂಚಿತರು, ಅಸ್ಪೃಶ್ಯರಲ್ಲಿ ಅಸ್ಪೃಶ್ಯರಿಗೆ ಮೀಸಲಾತಿ ನೀಡಿಲ್ಲ. ಬದ್ಧತೆ ಪ್ರದರ್ಶಿಸಲಿಲ್ಲ ಎಂದು ಟೀಕಿಸಿದರು.

ಒಳ ಮೀಸಲಾತಿ ಬಗ್ಗೆ ಆತುರ ಪಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ಸೂಚಿಸಿದ್ದರೂ, ರೇವಂತ್ ರೆಡ್ಡಿ ಅವರು ಒಳ ಮೀಸಲಾತಿ ಜಾರಿಗೊಳಿಸಿದ್ದಾರೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಪಂಜಾಬ್ನಲ್ಲೂ ಅಲ್ಲಿನ ಸರ್ಕಾರ ಇದನ್ನು ಜಾರಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಉದಾಸೀನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ 5 ತಿಂಗಳ ಹಿಂದೆ ಮಾದಿಗರು ಹೋರಾಟ ಮಾಡಿದಾಗ ಕೇವಲ 3 ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಕುರಿತು ಸಚಿವರು ಆಶ್ವಾಸನೆ ಕೊಟ್ಟಿದ್ದಾರೆ. ಬಳಿಕ ನಾಗಮೋಹನ್‌ದಾಸ್ ಆಯೋಗ ರಚಿಸಿ 40 ದಿನಗಳ ಗಡುವು ಕೊಟ್ಟಿದ್ದರು. ಮತ್ತೆ ಅವರು ಸಮಯ ಕೇಳಿದರು. ಸರ್ಕಾರದಿಂದ ಅವರಿಗೆ ನಿರೀಕ್ಷಿತ ಸಹಕಾರ ಸಿಕ್ಕಿಲ್ಲ. ರಾಜಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಅವಕಾಶ ಕುರಿತಂತೆ ಮಾಹಿತಿಯನ್ನೇ ಕೊಡಲಿಲ್ಲ ಎಂದರು.

ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇಲ್ಲ.

ಕಾಂತರಾಜು ವರದಿಯನ್ನು ಜಾರಿಗೆ ತರಲಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದು 4 ವರ್ಷ 10 ತಿಂಗಳಾಗಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ನಿಮ್ಮಿಂದ ಆಗಿಲ್ಲ ಎಂದು ಟೀಕಿಸಿದರು.

ಮಾಡು ಇಲ್ಲವೇ ಮಡಿ ಹೋರಾಟ: ಕಾರಜೋಳ

ಆ. 16ರಿಂದ ಒಳ ಮೀಸಲಾತಿ ಜಾರಿ ಮಾಡದೆ ಇದ್ದರೆ, ಅಸಹಕಾರ ಚಳವಳಿ ಮಾಡುವುದು ಅನಿವಾರ್ಯ ಎಂದು ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ದಲಿತರಿಗೆ ಮೋಸ ಮಾಡಿಲ್ಲ ಎಂದು ಹೇಳುತ್ತಾರೆ. ವಿಧಾನಸಭೆ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ ಇದನ್ನು ತಿಳಿಸಿದ್ದರು. ಮೊದಲನೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ನಿರಂತರವಾಗಿ ಮಾದಿಗರಿಗೆ ಮೋಸ ಮಾಡುತ್ತಲೇ ಬಂದಿದೆ. ಅದಕ್ಕಾಗಿಯೇ ಮಾಡು ಇಲ್ಲವೇ ಮಡಿ ಎನ್ನುವ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.

ನಾಗಮೋಹನ್‌ದಾಸ್ ಅವರಿಂದ 40 ದಿನಗಳಲ್ಲಿ ವರದಿ ತರಿಸುವುದಾಗಿ ಹೇಳಿದ್ದರು. 6 ತಿಂಗಳಾದರೂ ಈ ಬಗ್ಗೆ ಗಮನವಿಲ್ಲ. ನಾಗಮೋಹನದಾಸ್ ಕೆಲವು ಮಾಹಿತಿ ಕೇಳಿ ಸರಕಾರಕ್ಕೆ ಪತ್ರ ಬರೆದರೂ ಉತ್ತರ ಲಭಿಸಿಲ್ಲ. ಸರಕಾರವೇ ಇದೆಲ್ಲವನ್ನೂ ಮುಚ್ಚಿಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ವಕ್ತಾರ ಹೆಚ್.ವೆಂಕಟೇಶ್ ದೊಡ್ಡೇರಿ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಮತ್ತು ಮುಖಂಡ ಸಂತೋಷ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net