

ಬೆಂಗಳೂರು: ಐಐಎಂಬಿಯ ಪ್ರೊಫೆಸರ್ ವಿರುದ್ಧದ ಹಣಕಾಸು ದುರ್ಬಳಕೆ ಸಂಬಂಧದ ತನಿಖೆಗೆ ರಚಿಸಲಾಗಿದ್ದ ವಿಚಾರಣಾ ಸಮಿತಿಯ ಕಾರ್ಯಾಚರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಪ್ರಕರಣ ಸಂಬಂಧ ಪ್ರೊಫೆಸರ್ ಗೋಪಾಲ್ ದಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ಈ ಆದೇಶವನ್ನು ಮಾಡಿದೆ.
ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಐಐಐಂಬಿಯ ನಿರ್ದೇಶರು ಮತ್ತು ಡೀನ್ ಜಾತಿ ಹೆಸರು ಮುಂದಿಟ್ಟುಕೊಂಡು ತಮಗೆ ಅಗೌರವ ತೋರುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದರು. ನಂತರ ಐಐಎಂಬಿಯ ನಿರ್ದೇಶಕರು ಮತ್ತು ಡೀನ್ ಅರ್ಜಿದಾರ ದಾಸ್ ವಿರುದ್ಧ ಸಿವಿಲ್ ಅರ್ಜಿ ದಾಖಲಿಸಿ ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಸಂಸ್ಥೆಯ ಬಗ್ಗೆ ಹಾಗೂ ತಮ್ಮ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿದ್ದಾರೆ. ಜತೆಗೆ ಅರ್ಜಿದಾರರಿಗೆ ಸಿಗಬೇಕಾದ ಬಡ್ತಿ ನೀಡುತ್ತಿಲ್ಲ ಎಂದು ಹೇಳಿದ್ದರು.
ಅಲ್ಲದೆ, ಅರ್ಜಿದಾರರ ದೂರನ್ನು ರಾಷ್ಟ್ರಪತಿಗೆ ಕಳುಹಿಸಲಾಗಿದೆ. ಇದೀಗ ರಾಷ್ಟ್ರಪತಿ ಅವರ ಕಾರ್ಯಾಲಯದ ನಿರ್ದೇಶನದ ಮೇರೆಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿದೆ. ಹಾಗಾಗಿ ಸಂಸ್ಥೆ ರಚಿಸಿರುವ ಸಮಿತಿಗೆ ತಡೆ ನೀಡಬೇಕು ಎಂದು ಕೋರಿದ್ದರು.
ಜತೆಗೆ ಅರ್ಜಿದಾರರು ನೀಡಿದ್ದ ದೂರಿಗೆ ಕೌಂಟರ್ ಆಗಿ ಅವರು ಪ್ರಯಾಣ ಭತ್ಯೆಯ ಬಿಲ್ ನಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಹಾಗಾಗಿ ಸದ್ಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ವಿಚಾರಣೆ ಮುಕ್ತಾಯವಾಗುವವರೆಗೆ ಇತರೆ ವಿಚಾರಣೆಗೆ ಅವಕಾಶ ನೀಡಬಾರದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ‘‘ಮುಂದಿನ ವಿಚಾರಣೆವರೆಗೆ ಎರಡನೇ ಪ್ರತಿವಾದಿ ಐಐಎಂಬಿ ಜೂ.24ರಂದು ವಿಚಾರಣಾ ಸಮಿತಿ ನೇಮಕ ಮಾಡಿ ಹೊರಡಿಸರುವ ಆದೇಶಕ್ಕೆ ತಡೆ ನೀಡಲಾಗುವುದು. ಜತೆಗೆ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲಾಗುವುದು, ಅವರು ಮೂರು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು’ ಎಂದು ಆದೇಶ ನೀಡಿದೆ.
ಜತೆಗೆ ಅರ್ಜಿದಾರರ ಕೋರಿಕೆ ಮಾನ್ಯ ಮಾಡಿದ ನ್ಯಾಯಾಲಯ ವಿಚಾರಣಾ ಸಮಿತಿ ಕಾರ್ಯನಿರ್ವಹಣೆಗೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.