

ಬೆಂಗಳೂರು: ವಿದೇಶದಲ್ಲಿ ನೆಲೆಸಿದ್ದ ಅನ್ಯಕೋಮಿನ ಯುವಕನೊಂದಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಬಳಿಕ ಪ್ರೀತಿಸಿ ವಿವಾಹವಾಗಲು ಮನೆಯಿಂದ ಪರಾರಿಯಾಗಿದ್ದ ಮತ್ತೊಂದು ಧರ್ಮದ ಯುವತಿಯ ಇಚ್ಛೆಯಂತೆ ತನ್ನ ಪತಿಯೊಂದಿಗೆ ನೆಲೆಸಲು ಹೈಕೋರ್ಟ್ ಅನುಮತಿ ನೀಡಿದೆ.
ಪ್ರಕರಣ ಸಂಬಂಧ ಯುವತಿಯ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪತಿ, ಯುವತಿ ವಯಸ್ಕಳಾಗಿದ್ದಾಳೆ. ಈಗಾಗಲೇ ವಿವಾಹವೂ ಆಗಿದೆ. ತನಗೆ ಆಕೆಯ ಯೋಗಕ್ಷೇಮ, ಭದ್ರತೆ ಮತ್ತು ಶಿಕ್ಷಣವನ್ನು ನೋಡಿಕೊಳ್ಳುವುದಕ್ಕೆ ಅನುಮತಿ ನೀಡಬೇಕೆಂದು ಮುಚ್ಚಳಿಕೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಾಲಯ ಪತಿಯೊಂದಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ.
ಇದೇ ಮಾ.31ರಂದು ಮನೆಯಿಂದ ಹೊರಗೆ ಹೋಗಿದ್ದ ಹಿರಿಯ ಮಗಳು ಹಿಂದಿರುಗಲಿಲ್ಲ. ತನ್ನ ಕಿರಿಯ ಮಗಳ ಮೊಬೈಲ್‌ಗೆ, ‘ನಾನು ಪ್ರೀತಿಸಿದ ಯವಕನೊಂದಿಗೆ ಹೋಗಿದ್ದೇನೆ. ನಾನು ಸದ್ಯ ಅವನೊಂದಿಗೆ ಇದ್ದೇನೆ. ಕ್ಷಮಿಸಿ’ ಎಂದು ಸಂದೇಶ ರವಾನಿಸಿದ್ದಳು. ನಂತರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪುತ್ರಿ ಮತ್ತು ಯುವಕ ಕೇರಳದ ಕಣ್ಣೂರಿಗೆ ತೆರಳಿದ್ದಾರೆ. ಅವರು ಕಣ್ಣೂರು ಮದುವೆ ಅಧಿಕಾರಿಗಳಿಗೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಲು ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಇರುವುದಾಗಿ ಬಲವಂತವಾಗಿ ಪುತ್ರಿಯನ್ನು ಯುವಕ ಮದುವೆಯಾಗುತ್ತಿದ್ದು, ಆಕೆಯ ಜೀವಕ್ಕೆ ಅಪಾಯವಿದೆ ಎಂಬ ಆತಂಕ ಕಾಡುತ್ತಿದೆ. ಆದ್ದರಿಂದ ಪುತ್ರಿಯನ್ನು ಪತ್ತೆ ಹಚ್ಚಿ ಕೋರ್ಟ್ ಹಾಜರಿಪಡಿಸಬೇಕು ಎಂದು ಆಕೆಯ ತಾಯಿ ದೂರು ದಾಖಲಿಸಿದ್ದರು.
ತಾಯಿಯೊಂದಿಗೆ ತೆರಳಲು ನಿರಾಕರಣೆ:
ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದರು. ಈ ವೇಳೆ ‘ನಾನು ತಾಯಿಯೊಂದಿಗೆ ತೆರಳುವುದಿಲ್ಲ.ನಾನು ವಯಸ್ಕಳಾಗಿದ್ದೇನೆ. ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಸ್ವಯಂಪ್ರೇರಿತವಾಗಿ ಯುವಕನೊಂದಿಗೆ ಹೋಗಿದ್ದೇನೆ. 2024ರ ಏ.1ರಂದು ಆತನನ್ನು ವಿವಾಹವಾಗಿದ್ದೇನೆ. ಆತನೊಂದಿಗೆ ಕಣ್ಣೂರಿನಲ್ಲೇ ನೆಲೆಸಿದ್ದೇನೆ. ಆತ ಅಥವಾ ಇತರರಿಂದ ಯಾವುದೇ ರೀತಿಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿಲ್ಲ’ ಎಂದು ಯುವತಿ ನ್ಯಾಯಮೂರ್ತಿಗಳ ಮುಂದೆ ವಿವರಿಸಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ಯುವತಿಯನ್ನು ಯುವಕನ ಸುಪರ್ದಿಗೆ ಕೂಡಲೇ ಒಪ್ಪಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ.