

ಬೆಂಗಳೂರು: ಪಕ್ಷ ಸಂಘಟನೆ, ಕಾರ್ಯಕರ್ತರಿಗೆ ಸ್ಥಾನ-ಮಾನದ ಕಾರಣ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಿಗೆ ನಿರ್ಣಾಯಕವಾಗಿವೆ.
ನೇರವಾಗಿ ವಿಧಾನ ಸಭೆ ಸಂಖ್ಯಾ ಬಲದ ಮೇಲೆ ಆಯ್ಕೆ ಮಾಡಬೇಕಾಗಿರುವುದರಿಂದ ಪಕ್ಷದ ಮುಖಂಡರು, ಪ್ರಮುಖ ಕಾರ್ಯಕರ್ತರು ವರಿಷ್ಠರ ಮೇಲೆ ದುಂಬಾಲು ಬಿದ್ದಿದ್ದಾರೆ.
ಜೆಡಿಎಸ್ ಶಾಸಕರ ಸಂಖ್ಯಾ ಬಲದ ಮೇಲೆ ಒಂದು ಸ್ಥಾನ ಗೆಲ್ಲಬಹುದಾಗಿದೆ. ಹಾಗಾಗಿ ಆ ಒಂದು ಸ್ಥಾನಕ್ಕೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಘಟಾನುಘಟಿಗಳು ಕೂಡ ಮೇಲ್ಮನೆ ಪ್ರವೇಶಿಸುವ ಮಹದಾಕಾಂಕ್ಷೆ ಹೊಂದಿದ್ದಾರೆ. ಇದು ಹೈಕಮಾಂಡ್‌ಗೆ ತಲೆನೋವು ತಂದಿದೆ.
ವಿಶೇಷವಾಗಿ ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿದ್ದವರು, ರಾಜ್ಯಸಭೆ ಸದಸ್ಯರಾದವರು ಕೂಡ ಆಕಾಂಕ್ಷಿಗಳಾಗಿರುವುದರಿಂದ ಪಕ್ಷದ ವರಿಷ್ಠರಿಗೆ ಅಭ್ಯರ್ಥಿ ಆಯ್ಕೆ ಹಾಗೂ ಅತೃಪ್ತರನ್ನು ತಣಿಸುವ ತಳಮಳ ಉಂಟಾಗಿದೆ.
ಒಬ್ಬರಿಗೆ ಕೊಟ್ಟರೆ, ಇನ್ನೊಬ್ಬರು ಮುನಿಸಿಕೊಳ್ಳುವ ಭಯ ಕಾಡುತ್ತಿದೆ. ಅಲ್ಲದೆ, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿರುವುದರಿಂದ ಪಕ್ಷದ ಎಪಿಸೆಂಟರ್ ಕೂಡ ಬೆಂಗಳೂರೇ ಆಗಿರುವುದರಿಂದ ಅಭ್ಯರ್ಥಿ ಆಯ್ಕೆ ಮತ್ತಷ್ಟು ಗೋಜಲಾಗಿದೆ. ಮೂವರು ಆಕಾಂಕ್ಷಿಗಳು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬೆನ್ನು ಬಿದ್ದರೆ, ಇನ್ನೊಬ್ಬ ಆಕಾಂಕ್ಷಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ನೆಚ್ಚಿಕೊಂಡಿದ್ದಾರೆ.
ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ಎಂ.ಾರೂಕ್, ರಮೇಶ್ ಗೌಡ ಅವರು ದೇವೇಗೌಡರ ಜತೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದಾರೆ.
ಪಕ್ಷದ ಹಿರಿಯ ಮುಖಂಡ ಜವರಾಯಿಗೌಡ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಜತೆನಿಕಟ ಸಂಪರ್ಕ ಹೊಂದಿದ್ದಾರೆ. ಜವರಾಯಿಗೌಡ ಮೂರು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಅಲ್ಲದೆ, ಪ್ರತಿ ಚುನಾವಣೆಯಲ್ಲೂ ದೊಡ್ಡ ಮಟ್ಟದ ಹಣ ಖರ್ಚು ಮಾಡಿ ಆರ್ಥಿಕವಾಗಿ ಹೊಡೆತ ತಿಂದಿದ್ದಾರೆ. ಅಷ್ಟೆಲ್ಲ ಆದರೂ ಹೈಕಮಾಂಡ್ ಹೇಳಿದಂತೆ ಕೇಳಿಕೊಂಡು ಪಕ್ಷಕ್ಕೆ ನಿಷ್ಠರಾಗಿಯೇ ಉಳಿದಿದ್ದಾರೆ. ಅಲ್ಲದೆ, ಈ ಬಾರಿ ಕಾರ್ಯಕರ್ತರಿಗೇ ಟಿಕೆಟ್ ಕೊಡಲು ಪಕ್ಷದ ವರಿಷ್ಠರು ಆಲೋಚಿಸಿರುವುದರಿಂದ ಜವರಾಯಿಗೌಡ ಅವರು ಮೇಲ್ಮನೆ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮೂಲಗಳು ತಿಳಿಸಿವೆ.