

ಶಿವಮೊಗ್ಗ: ಹಿಂದೂಗಳ ಆರಾಧ್ಯ ದೈವ ಶಿವಲಿಂಗವನ್ನು ಕಾರಂಜಿ ರೂಪದಲ್ಲಿ ಅಲಂಕಾರಿಕ ವಸ್ತುವನ್ನಾಗಿ ಮಾಡುವ ಮೂಲಕ ಕೇಂದ್ರ ಸರ್ಕಾರವು ಕೋಟ್ಯಂತರ ದೈವ ಭಕ್ತರಿಗೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಶಿವಕುಮಾರ್ ಗೌಡ ಆರೋಪಿಸಿದರು.
ದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ವಿವಿಧ ದೇಶಗಳ ಗಣ್ಯರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೆಹಲಿಯಲ್ಲಿ ಅಲಂಕಾರ ಮಾಡುತ್ತಿದ್ದಾರೆ. ಅದರಂತೆ ದೆಹಲಿಯ ಬೀದಿಗಳಲ್ಲಿ ಶಿವಲಿಂಗದ ಆಕಾರದ ಕಾರಂಜಿಗಳನ್ನು ಅಳವಡಿಸುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸದಾ ಕಾಲ ಹಿಂದೂ ದೇವರ ಹೆಸರನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವ ಬಿಜೆಪಿಯು ಇದೀಗ ಪವಿತ್ರ ಶಿವಲಿಂಗವನ್ನು ಅಲಂಕಾರಕ್ಕೆ ಬಳಸಿಕೊಳ್ಳುವ ಮೂಲಕ ಅವಮಾನ ಮಾಡಿದೆ. ಕೂಡಲೇ ಕೇಂದ್ರ ಸರ್ಕಾರವು ಇಂತಹ ಅಲಂಕಾರಕ್ಕೆ ಬಳಸಿರುವ ಶಿವಲಿಂಗಗಳನ್ನು ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೂಡಲೇ ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಕಿರಣ್‌ಕುಮಾರ್, ಸುರೇಶ್ ಕೌಟೇಕರ್, ರಮೇಶ್ ಮಹೇಂದ್ರಕರ್, ನಜೀರ್ ಅಹ್ಮದ್, ಲಿಂಗರಾಜು, ಶೋಭಾ ಸುದ್ದಿಗೋಷ್ಠಿಯಲ್ಲಿದ್ದರು.