

ಹೊಳೆಹೊನ್ನೂರು: ಗ್ರಾಮಾಂತರ ಕ್ಷೇತ್ರ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ. ಹಾಗಾಗಿ ಸರ್ಕಾರ ನೀಡುತ್ತಿರುವ ಅಲ್ಪ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಿಕೆ ಮಾಡುವುದು ಕಷ್ಟವಾಗುತ್ತಿದೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.
ಸಮೀಪದ ಆನವೇರಿಯಲ್ಲಿ ಮಂಗಳವಾರ 27 ಲಕ್ಷ ರೂ. ಅನುದಾನದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ತುರ್ತು ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಆನವೇರಿಯಲ್ಲಿ ಆಯುರ್ವೇದಿಕ್ ಆಸ್ಪತ್ರೆಗೆ ಕಟ್ಟಡ ನಿರ್ಮಾಣ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ರೇಣುಕನಗರದ ಬಳಿ ಭದ್ರಾ ನಾಲೆಗೆ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು. ಸಮಾಜದ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರೆಯುವಂತಾಗಬೇಕು. ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ವೈದ್ಯೆ ವಿಜಯವಾಣಿ, ಸುರೇಶ್ ಗೌಡ, ಕುಬೇಂದ್ರಪ್ಪ, ಉಮೇಶ್, ನಾಗರಾಜ್, ಆಂಜನೇಯ, ಗಣೇಶ್, ಶಿವರಾಜ್, ಟಿ.ಎಂ ಸತೀಶ್, ರುದ್ರೇಶ್, ಆನಂದ, ತೇಜು, ರಫೀಕ್, ನಟರಾಜ್ ಇತರರಿದ್ದರು.