

ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಬಿಎಂಆರ್ ಸಿಎಲ್ ಗೆ ಅರ್ಜಿ ಹಾಕಲು ಕೆಎಂಎಫ್ ಗೆ ಸೂಚನೆ ನೀಡಿದ್ದು, 10 ಸ್ಥಳಗಳ ಪೈಕಿ 8 ಕಡೆಗಳಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ಕುಮಾರಪಾರ್ಕ್ ಸರ್ಕಾರಿ ನಿವಾಸದ ಬಳಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು.ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ತೆರೆಯುತ್ತಿರುವ ಬಗ್ಗೆ ಕೇಳಿದಾಗ, “ಬಿಎಂಆರ್ ಸಿಎಲ್ ಅವರು ಟೆಂಡರ್ ಕರೆದಿದ್ದು, ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್ ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದು, ಟೆಂಡರ್ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ ಅಮೂಲ್ ಅವರು ಜಾಗತಿಕ ಟೆಂಡರ್ ನಲ್ಲಿ ಅರ್ಜಿ ಹಾಕಿ ಮಳಿಗೆ ತೆರೆದಿದ್ದಾರೆ. ತೆರೆಯಲಾಗಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಉಳಿದ 8 ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
“ಇಂದು ಬೆಂಗಳೂರು ನಗರದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪಕ್ಷ ಸಂಘಟನೆ ವಿಚಾರ ಹಾಗೂ ಪಾಲಿಕೆ ಚುನಾವಣೆ ಸೇರಿದಂತೆ ಇಂದು ನಮ್ಮ ಪಕ್ಷದ ಶಾಸಕರ ಜತೆ ಚರ್ಚೆ ಮಾಡಿದ್ದೇನೆ. ಜಿಬಿಎಯಲ್ಲಿ ಎಷ್ಟು ಪಾಲಿಕೆ ರಚನೆ ಮಾಡಬೇಕು ಎನ್ನುವ ವಿಚಾರವಾಗಿ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿದ್ದು, ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಬಾಕಿ ಇದೆ. ಅವರ ವಿಶ್ವಾಸ ಪಡೆದು ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.