

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಿ ನಿರ್ವಹಿಸಬೇಕು ಎಂದು ಕಾಲೇಜು ಶಿಕ್ಷಣ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಜತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ಯುವ ಆಪದ್ ಮಿತ್ರ ಯೋಜನೆಯ ಭಾಗವಾಗಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗುತ್ತಿರುವ ವಿಪತ್ತು ನಿರ್ವಹಣಾ ತರಬೇತಿ ಶಿಬಿರಕ್ಕೆ ಆಸಕ್ತ ರೋವರ್ಸ್ ಮತ್ತು ರೇಂಜರ್ಸ್, ದಳನಾಯಕರನ್ನು ಕಡ್ಡಾಯವಾಗಿ ನಿಯೋಜಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಅ.24 ರಿಂದ 30ರವರೆಗೆ ಡಾ. ಅನಿ ಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.
ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರಿಗೆ ಮುಂದಿನ 3 ವರ್ಷಗಳ ಕಾಲ ಜಿಲ್ಲಾಡಳಿತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರು ತಿಳಿಸಿದ ಸಂದರ್ಭದಲ್ಲಿ ಸೇವೆಗೆ ಸಿದ್ಧರಿರಬೇಕು. ತರಬೇತಿ ಹೊಂದಿದವರಿಗೆ ಯುವ ಆಪದ್ ಮಿತ್ರ ಯೋಜನೆಯಡಿ ಹತ್ತು ಸಾವಿರ ರೂ.ಗಳ ತುರ್ತು ಪ್ರತಿಕ್ರಿಯೆ ಕಿಟ್ ಅನ್ನು ನೀಡಲಾಗುತ್ತದೆ. ಮುಂದಿನ ಮೂರು ವರ್ಷಗಳ ಕಾಲ ಜೀವ ಮತ್ತು ಆರೋಗ್ಯ ವಿಮೆಯಿಂದ ರಕ್ಷಣೆ ಮತ್ತು ವಿಶೇಷ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.