ಒಡಿಶಾ ವಿದ್ಯಾರ್ಥಿನಿಯ ಸಾವು: ಇದು ಸರ್ಕಾರದ ಯೋಜಿತ ಕೊಲೆ ಎಂದು ವಿಪಕ್ಷಗಳ ಆಕ್ರೋಶ! Student Death

Student Death
Published on

Student Death : ಲೈಂಗಿಕ ಕಿರುಕುಳಕ್ಕೊಳಗಾದ ನೋವಲ್ಲೇ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದಲ್ಲಿ ಭಾರಿ ಸಂಚಲವನ್ನು ಉಂಟುಮಾಡಿದೆ. ಇದರ ಬೆನ್ನಲ್ಲೇ ಈ ದುರ್ಘಟನೆಗೆ ಸರ್ಕಾರದ ವ್ಯವಸ್ಥಿತ ವೈಫಲ್ಯವೆಂದು ವಿಪಕ್ಷಗಳು ಹರಿಹಾಯ್ದಿವೆ.

ಬಾಲಸೋರ್‌ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ ಬಿ.ಎಡ್. ವಿದ್ಯಾರ್ಥಿನಿ, ತನ್ನ ವಿಭಾಗದ ಮುಖ್ಯಸ್ಥರು ಪದೇಪದೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ ಮೂರು ದಿನವಾದರೂ ಯಾವುದೇ ರೀತಿಯಲ್ಲಿ ಕೈಗೊಳ್ಳದ ಕಾರಣ ಮನನೊಂದು ಸೋಮವಾರ (ಜುಲೈ 14) ರಾತ್ರಿ ಭುವನೇಶ್ವರದ ಏಮ್ಸ್‌ನಲ್ಲಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದಳು.

ಈ ಘಟನೆಯ ಬಳಿಕ ಮಂಗಳವಾರ (ಜುಲೈ 15) ಸರ್ಕಾರದ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿರುವ ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ಇಂದೊಂದು ಸಾಂಸ್ಥಿಕ ದ್ರೋಹ ಮತ್ತು ಯೋಜಿತ ಅನ್ಯಾಯ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಇದು ಅಪಘಾತವಲ್ಲ, ಸಹಾಯ ಮಾಡುವವರ ಮೌನವಾದ ವ್ಯವಸ್ಥೆಯ ಪರಿಣಾಮವಾಗಿದೆ. ವಿದ್ಯಾರ್ಥಿನಿಯ ಸಾವು ಕೇವಲ ದೈಹಿಕ ಗಾಯದ ಪರಿಣಾಮವಲ್ಲ, ಇದರಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪಾಲು ಕೂಡ ಇದೆ. ಇದೇ ವ್ಯವಸ್ಥೆ ಆಕೆಯನ್ನು ತನ್ನ ಹೋರಾಟದಲ್ಲಿ ಏಕಾಂಗಿಯಾಗಿಸಿತು ಎಂದಿದ್ದಾರೆ ಟೀಕಾ ಪ್ರಹಾರ ನಡೆಸಿದ್ದಾರೆ.

ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ ಎಂದ ರಾಹುಲ್​

ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ ನಾಯಕ ರಾಹುಲ್ ಗಾಂಧಿ, ಮೋಹನ್ ಚರಣ್ ಮಾಝಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಿದರು. ಕಾಲೇಜು ಹುಡುಗಿಯ ಸಾವು "ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ" ಎಂದು ಜರಿದಿದ್ದಾರೆ.

ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಗಳ ಸಾವು ಬಿಜೆಪಿ ವ್ಯವಸ್ಥೆಯಿಂದ ನಡೆದ ಕೊಲೆಗಿಂತ ಕಡಿಮೆಯಿಲ್ಲ ಎಂದು ರಾಹುಲ್​ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ. ಆ ಧೈರ್ಯಶಾಲಿ ವಿದ್ಯಾರ್ಥಿನಿ ತನ್ನ ಮೇಲೆ ನಡೆದ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದಳು. ಆದರೆ, ನ್ಯಾಯ ಒದಗಿಸುವ ಬದಲು,ಆಡಳಿತಾರೂಢ ಬಿಜೆಪಿ ಆರೋಪಿಗಳನ್ನು ರಕ್ಷಿಸುತ್ತಿದೆ. ಆಕೆಗೆ ಬೆದರಿಸಿ, ಹಿಂಸಿಸಿ ಮತ್ತು ಪದೇ ಪದೇ ಅವಮಾನ ಮಾಡಲಾಯಿತು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ರಾಹುಲ್ ಗಾಂಧಿ, ಮೋದಿ ಜೀ, ಒಡಿಶಾ ಮತ್ತು ಮಣಿಪುರದಲ್ಲಿ ದೇಶದ ಹೆಣ್ಣುಮಕ್ಕಳು ಉರಿಯುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ಆದರೆ, ನೀವು ಮಾತ್ರ ಮೌನವಾಗಿರುತ್ತೀರಿ. ದೇಶಕ್ಕೆ ನಿಮ್ಮ ಮೌನದ ಅಗತ್ಯವಿಲ್ಲ, ಉತ್ತರಗಳು ಬೇಕಾಗಿವೆ. ಭಾರತದ ಹೆಣ್ಣುಮಕ್ಕಳಿಗೆ ಸುರಕ್ಷತೆ ಮತ್ತು ನ್ಯಾಯ ಬೇಕು. ತಮ್ಮ "ಮೌನ"ವನ್ನು ಮುರಿದು ವ್ಯವಸ್ಥೆಯನ್ನು ಸರಿಪಡಿಸಲು ಇದು ಸೂಕ್ತ ಸಮಯ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net