

ಶಿವಮೊಗ್ಗ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಕೌಟ್ ಮತ್ತು ಗೈಡ್ಸ್ ಅತ್ಯಂತ ಪರಿಣಾಮಕಾರಿ. ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಶಿಸ್ತು ಬೆಳೆಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಗರದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಸ್ಟಿಸ್ ಕೆ.ಶಂಕರನಾರಾಯಣ ರಾವ್ ಸ್ಮಾರಕ ರಾಜ್ಯಮಟ್ಟದ ಮುಕ್ತ ದಳಗಳ ರ‌್ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಇಂತಹ ಸೇವಾ ಮನೋಭಾವದ ಚಟುವಟಿಕೆ ಅತ್ಯವಶ್ಯಕ ಎಂದರು.
ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಅಗತ್ಯ. ಈ ಚಳವಳಿ ಪ್ರತಿ ಮನೆಯನ್ನೂ ತಲುಪಬೇಕು. ಇದರಲ್ಲಿ ಮಕ್ಕಳು ಭಾಗವಹಿಸುವುದರಿಂದ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ಸಿಗುತ್ತದೆ. ಪರಸ್ಪರ ಒಡನಾಟ ಹೆಚ್ಚಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಅಧ್ಯಕ್ಷೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಮೂರು ದಿನಗಳ ರ‌್ಯಾಲಿಯಲ್ಲಿ ಚಾರಣ, ಸಾಹಸ ಕ್ರೀಡೆಗಳು, ಮಕ್ಕಳಿಗೆ ಬೌದ್ಧಿಕ ಪರೀಕ್ಷೆ, ವಿವಿಧ ರೀತಿಯ ಆಟಗಳ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಲಾಗುವುದು ಎಂದರು.
ಜಿಲ್ಲಾ ಆಯುಕ್ತ ಎಸ್.ಜಿ.ಆನಂದ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರ್, ಆಯುಕ್ತರಾದ ಕೆ.ರವಿ, ಸರಸ್ವತಿ ನಾಗರಾಜ್, ಶಿವಶಂಕರ್, ರಾಜೇಶ್ ಅವಲಕ್ಕಿ, ಮೀನಾಕ್ಷಮ್ಮ, ಗೀತಾ ಚಿಕ್ಕಮಠ, ಜ್ಯೋತಿ, ಮಲ್ಲಿಕಾರ್ಜುನ್ ಕಾನೂರು, ಲಕ್ಷ್ಮೀ ಕೆ.ರವಿ, ವೈ.ಆರ್.ವೀರೇಶಪ್ಪ, ಪವನ್ ಕುಮಾರ್, ಚೂಡಾಮಣಿ ಇ.ಪವಾರ್ ಇತರರಿದ್ದರು.