

ಸೊರಬ: ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗ್ರಾಮದ ಪತ್ರಿಕಟ್ಟೆ ಸರ್ಕಲ್ ಬಳಿ ಮಂಟಪದಲ್ಲಿ ಗುರುವಾರ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಭಕ್ತರ ಇಷ್ಟಾರ್ಥದಂತೆ ಹಾಗೂ ಲೋಕಕಲ್ಯಾಣಾರ್ಥ ಗ್ರಾಮದಲ್ಲಿ ವಿಶೇಷ ಶರನ್ನವ ರಾತ್ರಿ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಾಡಿನ ಜನತೆಗೆ ದೇವಿ ಉತ್ತಮ ಮಳೆ, ಬೆಳೆ ನೀಡಿ ಸಮೃದ್ಧವಾಗಿರಿಸಲಿ ಎಂದು ಪ್ರಾರ್ಥಿಸಿದರು.
ಜಡೆ ಸಂಸ್ಥಾನ ಮಠದಿಂದ ಪೂರ್ಣಕುಂಭ ಮತ್ತು ವಾದ್ಯಮೇಳಗಳೂಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಪ್ರತಿದಿನ ಬೆಳಗ್ಗೆ ರುದ್ರಾಭಿಷೇಕ, ಅಷ್ಟೋತ್ತರ ಅಲಂಕಾರ, ಮಂಗಳಾರತಿ, ಶ್ರೀದುರ್ಗ ಸಪ್ತಶತಿ ಪಾರಾಯಣ, ದುರ್ಗಾ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಕಳಸ ಪೂಜೆ, ಕುಂಕುಮಾರ್ಚನೆ ವಿಶೇಷ ಪೂಜೆಗಳು ಜರುಗಲಿವೆ. ಅ.12ರಂದು ಶ್ರೀಸಿದ್ದವೃಷಭೇಂದ್ರ ಮಹಾಶಿವಯೋಗಿಗಳ ಉತ್ಸವ ಮೂರ್ತಿಯೊಂದಿಗೆ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ಕೆಂಪಿನ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ, ಗುರುಶಾಸೀ ಸೇರಿ ಇತರರಿದ್ದರು.