

ಬೆಂಗಳೂರು: ವಿಶ್ವಕರ್ಮ ಸಮುದಾಯದ ಆಶೋತ್ತರಗಳ ಚರ್ಚೆ, ಸಮುದಾಯದ ಎಲ್ಲ ಜನರು ಒಂದೆಡೆ ಸೇರಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ಬೃಹತ್ ಸಮಾವೇಶ ಆಯೋಜಿಸಲು ರಾಜ್ಯ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ, ಎಂಎಲ್ಸಿ ಕೆ.ಪಿ.ನಂಜುಂಡಿ ಚಿಂತನೆ ನಡೆಸಿದ್ದಾರೆ.
ಶಾಸಕರ ಭವನದ ಸಭಾಂಗಣದಲ್ಲಿ ಸಮುದಾಯದ ಬೇಡಿಕೆಗಳು ಕುರಿತು ಭಾನುವಾರ ಏರ್ಪಡಿಸಿದ್ದ ಮಹಾಸಭೆ ಸಭೆಯ ನಂತರ ಅವರು ಮಾತನಾಡಿ ಬೇಲೂರು, ಹಳೇಬೀಡಿನ ದೇವಸ್ಥಾನಗಳನ್ನು ರೂಪಿಸಿದ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಬೇಲೂರಿನ ಚನ್ನಕೇಶವ ದೇವಾಲಯದ ಆವರಣದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ 92 ಸಾವಿರ ಜನರು ಪಡೆದಿರುವ ಸಾಲ ಮತ್ತು ಬಡ್ಡಿ ಮನ್ನಾ, ನಿಗಮಕ್ಕೆ 50 ಕೋಟಿ ರೂ. ಅಭಿವೃದ್ಧಿ ಅನುದಾನ ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ವಿಶ್ವಕರ್ಮ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಬೇಡಿಕೆ ಬಗ್ಗೆ ಸಮುದಾಯದಲ್ಲಿ ಯಾವುದೇ ಗೊಂದಲವಿಲ್ಲ. ಸಮಾಜದಲ್ಲಿ 41 ಉಪಜಾತಿಗಳಿದ್ದು, ಕುಲಶಾಸ ಅಧ್ಯಯನದ ನಂತರ ಸ್ಪಷ್ಟ ಚಿತ್ರಣ ಹೊರಬರಲಿದೆ ಎಂದು ಕೆ.ಪಿ.ನಂಜುಂಡಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಶ್ರೀ ನಾಗಮೂರ್ತೆಂದ್ರ ಸ್ವಾಮೀಜಿ ಲೇಬಗೇರಿ, ಶ್ರೀ ದೊಡ್ಡೇಂದ್ರ ಸ್ವಾಮೀಜಿ ಸುಲೇಪೇಟ, ಶ್ರೀ ಗಣೇಶ ಸ್ವಾಮೀಜಿ ಕೊಪ್ಪಳ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಲೋಹಿತ ಕಲ್ಲೂರ, ಮುಖಂಡರು ಇದ್ದರು.