ಟೇಬಲ್‌ಟಾಪ್ ರನ್‌ವೇ ಹೊಂದಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ, ಮಳೆ, ಮಂಜು ಅಥವಾ ಧೂಳಿನ ಕಾರಣದಿಂದಾಗಿ ದೃಷ್ಟಿ ಗೋಚರತೆ ಕಡಿಮೆಯಾದಾಗ ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಕಾಣುವಂತೆ ಮಾಡಲು ಈ ಅತ್ಯಾಧುನಿಕ ದೀಪಗಳ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲೇ ಮೊದಲ ಹಾಗೂ ಏಷ್ಯಾದಲ್ಲೇ ಎರಡನೇ ಅತ್ಯಂತ ವಿಶಿಷ್ಟವಾದ ಏರ್‌ಫೀಲ್ಡ್ ಲೈಟಿಂಗ್ ಯೋಜನೆಯಾಗಿದೆ. ರನ್‌ವೇಯಿಂದ ಹೊರಕ್ಕೆ 900 ಮೀಟರ್ ಉದ್ದದವರೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ 17 ಲ್ಯಾಟ್ಟಿಸ್ ಗೋಪುರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು ಗೋಪುರಗಳು ಐತಿಹಾಸಿಕ ಕುತುಬ್ ಮಿನಾರ್‌ಗಿಂತಲೂ ಎತ್ತರವಾಗಿದ್ದು, ತಾಂತ್ರಿಕವಾಗಿ ಅತ್ಯಂತ ಸಂಕೀರ್ಣವಾದ ಯೋಜನೆಯಾಗಿದೆ. ಪ್ರತಿಯೊಂದು ಗೋಪುರವು 4 ದೀಪಗಳು ಮತ್ತು ಮಧ್ಯದಲ್ಲಿ ಮಿನುಗುವ ದೀಪದ ವ್ಯವಸ್ಥೆಯನ್ನು ಒಳಗೊಂಡಿದೆ. ಇವುಗಳ ನಿರ್ವಹಣೆಯನ್ನು ಸುಲಭಗೊಳಿಸಲು, ದೀಪಗಳಿರುವ ಭಾಗವನ್ನು ನೆಲದ ಮಟ್ಟಕ್ಕೆ ಕೆಳಗಿಳಿಸುವ ವಿಶಿಷ್ಟ ತಂತ್ರಜ್ಞಾನ ಇಲ್ಲಿದೆ.