ರೈಲ್ವೆ ಲೆವೆಲ್ ಕ್ರಾಸಿಂಗ್ ಪರಿಶೀಲನೆ

ರೈಲ್ವೆ ಲೆವೆಲ್ ಕ್ರಾಸಿಂಗ್ ಪರಿಶೀಲನೆ
Published on

ನಂಜನಗೂಡು: ಪಟ್ಟಣದ ಅಪೋಲೊ ವೃತ್ತದ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ (ಗೇಟ್) ಉಳಿಸುವಂತೆ ಚಾಮಲಾಪುರದ ಹುಂಡಿ ಗ್ರಾಮಸ್ಥರು ಮನವಿ ಮಾಡಿದ ಮೇರೆಗೆ ಮಂಗಳವಾರ ಸಂಸದ ಸುನೀಲ್ ಬೋಸ್ ಹಾಗೂ ಶಾಸಕ ದರ್ಶನ್ ಧ್ರುವನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಚಾಮಲಾಪುರದ ಹುಂಡಿ ಗ್ರಾಮಸ್ಥರು ನೂತನ ಮೇಲ್ಸೆತುವೆ ನಿರ್ಮಾಣ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆ ಈ ಪ್ರದೇಶದಲ್ಲಿದ್ದ ರೈಲ್ವೆ ಲೆವೆಲ್ ಕ್ರಾಸಿಂಗ್‌ನ್ನು ಮುಚ್ಚಲು ಸಿದ್ದತೆ ಮಾಡಿಕೊಂಡಿದೆ. ರೈಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಿದರೆ ಹಬ್ಬಗಳ ಸಂದರ್ಭದಲ್ಲಿ ಗ್ರಾಮದಿಂದ ಹೊರಡುವ ದೇವರ ಮೆರವಣಿಗೆ ಹಾಗೂ ಗ್ರಾಮದಿಂದ ಪೂರ್ವಕ್ಕೆ ಇರುವ ಸ್ಮಶಾನಕ್ಕೆ ತೆರಳಲು ತೊಂದರೆ ಉಂಟಾಗುತ್ತದೆ. ಆದ್ದರಿಂದ ರೈಲ್ವೆ ಲೆವೆಲ್ ಕ್ರಾಸಿಂಗ್ ಉಳಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು.

ಗ್ರಾಮಸ್ಥರ ಆಶಯದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಉಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಗ್ರಾಮಸ್ಥರ ಮನವಿ ಮೇರೆಗೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಬಳಿ ಅಪೋಲೊ ವೃತ್ತದ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಉಳಿಸಿಕೊಡುವಂತೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಮನವಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಮುಖಂಡ ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ದೇವನೂರು ಮಹದೇವಪ್ಪ, ಇಂಧನ್ ಬಾಬು, ತಮ್ಮಣ್ಣೇಗೌಡ, ಕೆಂಪಣ್ಣ, ಸಿ.ಆರ್.ಮಹದೇವು, ಕೆ.ಬಿ.ಸ್ವಾಮಿ, ಎನ್.ಟಿ. ಗಿರೀಶ್, ಮಲ್ಕುಂಡಿ ಪುಟ್ಟಸ್ವಾಮಿ, ಮಂಜುನಾಥ್, ಕುರಿಹುಂಡಿ ರಾಜು, ಲಕ್ಷ್ಮೀನಾರಾಯಣ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net