

ಶಿವಮೊಗ್ಗ: ಶೋಷಿತ ಸಮಾಜವನ್ನು ಅಪಹಾಸ್ಯದ ಭಾವದಲ್ಲಿ ಕರೆಯಲಾಗುವ ಹಜಾಮ ಎಂಬ ಪದವನ್ನು ಹಿಂದುಳಿದ ಜಾತಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾ ಸವಿತ ಸಮಾಜದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸವಿತಾ ಸಮಾಜಕ್ಕೆ ಸಂಬಂಧಿಸಿ 27 ಉಪ ಪಂಗಡಗಳಿವೆ. ಅದರಲ್ಲಿ ಹಜಾಮ ಶಿರೋನಾಮೆ ಪಂಗಡವನ್ನು ತೆಗೆದು ಹಾಕಬೇಕೆಂದು ಸವಿತಾ ಸಮಾಜ ಹಿಂದೆಯೇ ಒತ್ತಾಯಿಸಿತ್ತು. ಈ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಆ ಪದವನ್ನು ಬಿಟ್ಟು ಸವಿತಾ ಎಂಬ ಶಿರೋನಾಮೆಯನ್ನು ಬಳಸುವಂತೆ ಆದೇಶ ನೀಡಿತ್ತು. ಆ ಆದೇಶದ ಪ್ರಕಾರವೇ ಈಗಲೂ ನಡೆಯುತ್ತಿದೆ. ಆದರೆ ಆಯೋಗವು ಪ್ರಕಟಿಸಿರುವ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಹಜಾಮ ಎಂಬ ಪದ ಇನ್ನೂ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕ್ಷೌರಿಕ, ಚೌರದ್, ಕ್ಷೌರಿಕ್ ಎಂಬ ವೃತ್ತಿ ಆಧಾರಿತವಾಗಿ ಜಾತಿಗಳನ್ನು ನಮೂದಿಸಲಾಗಿದೆ. ಅದೆಲ್ಲವನ್ನೂ ಕೈಬಿಡಬೇಕು. ಜಾತಿ ದೃಢೀಕರಣ ಪತ್ರದಲ್ಲಿ ಭಂಡಾರಿ ಬದಲಿಗೆ ಬಂಡಾರಿ ಎಂದು ನಮೂದಾಗುತ್ತಿದೆ. ಜಾತಿ ಪಟ್ಟಿಯಲ್ಲಿರುವ ಭಂಡಾರಿ ಎಂಬ ಜಾತಿ ಸವಿತಾ ಸಮಾಜಕ್ಕೆ ಸೇರಿದ್ದೇ ಎಂಬ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇತ್ತೀಚೆಗೆ ಕೆಲ ಸಿನಿಮಾಗಳಲ್ಲೂ ಹಜಾಮ ಎಂಬ ಪದ ಉಪಯೋಗಿಸುತ್ತಿರುವುದು ಸಮಾಜಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಂ.ಪರಮೇಶ್, ಪ್ರಮುಖರಾದ ಜಿ.ಕೃಷ್ಟಮೂರ್ತಿ, ರಮೇಶ್, ಎನ್.ಬಿ.ಮಂಜುನಾಥ, ಎಸ್.ಎಂ. ಪ್ರಭಾಕರ, ರಂಜಿತ್ ಕುಮಾರ್ ಮುಂತಾದವರಿದ್ದರು.