

ನವದೆಹಲಿ: ದೇಶೀಯ ತಂತ್ರಜ್ಞಾನದಲ್ಲಿ ನಿರ್ವಿುಸಲಾದ ಪ್ರಪ್ರಥಮ ವಿಮಾನ ವಾಹಕ ನೌಕೆ ಬುಧವಾರ ಕೊಚ್ಚಿ ಬಂದರಿನಲ್ಲಿ ಪರೀಕ್ಷಾರ್ಥ ಯಾನ ಆರಂಭಿಸಿದೆ. ಈ ನೌಕೆ ನಿರ್ಮಾಣದೊಂದಿಗೆ, ಸಮರ ವಿಮಾನ ವಾಹಕ ನೌಕೆ ನಿರ್ವಿುಸುವ ಸಾಮರ್ಥ್ಯವಿರುವ ಕೆಲವೇ ದೇಶಗಳ ಸಾಲಿಗೆ ಸೇರಿದ ಸಾಧನೆಯನ್ನು ಭಾರತ ಮಾಡಿದೆ. ನೌಕಾ ಪಡೆಗೆ ಸೇರ್ಪಡೆ ಆಗುವವರೆಗೆ ಇದನ್ನು ಐಎಸಿ-1 ಎಂದು ಕರೆಯಲಾಗುತ್ತದೆ. ನಂತರ ಇದರ ಹೆಸರು ‘ಐಎನ್ಎಸ್ ವಿಕ್ರಾಂತ್’ ಆಗಲಿದೆ. ಈ ನೌಕೆ 2022ರ ಆಗಸ್ಟ್ನಲ್ಲಿ ನೇವಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದ್ದು ಭಾರತದ ಎರಡನೇ ಯುದ್ಧ ವಿಮಾನ ವಾಹಕ ನೌಕೆಯಾಗಲಿದೆ. ಪ್ರಸ್ತುತ ರಷ್ಯಾ ಮೂಲದ ‘ಐಎನ್ಎಸ್ ವಿಕ್ರಮಾದಿತ್ಯ’ ಭಾರತದ ಇಂಥ ಏಕೈಕ ನೌಕೆಯಾಗಿದೆ.
ಮುಖ್ಯಾಂಶ
ಮರುಅವತಾರ
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಐಎನ್ಎಸ್ ವಿಕ್ರಾಂತ್ ವಹಿಸಿದ್ದ ಮಹತ್ವದ ಪಾತ್ರದ ಸುವರ್ಣ ಮಹೋತ್ಸವ ವರ್ಷದಲ್ಲೇ ಅದರ ಮರುಅವತಾರದ ಈ ನೌಕೆ ತನ್ನ ಚೊಚ್ಚಲ ಸಾಗರ ಪರೀಕ್ಷಾ ಪಯಣ ಆರಂಭಿಸಿದೆ. ಇದೊಂದು ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣ. ಇದರ ಮೂಲಕ ನೌಕಾ ಪಡೆಯ ಸಾಮರ್ಥ್ಯ ಹೆಚ್ಚಳ ಮಾತ್ರವಲ್ಲದೆ ಐತಿಹಾಸಿಕ ಐಎನ್ಎಸ್ ವಿಕ್ರಾಂತ್ನ ಗತ ವೈಭವವನ್ನು ಚಿರಸ್ಥಾಯಿ ಯಾಗುವಂತೆ ಮಾಡಲಾಗುತ್ತದೆ ಎಂದು ನೌಕಾ ಪಡೆ ತಿಳಿಸಿದೆ. ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳ ಯೋಜನೆಯಲ್ಲಿ ಈ ನೌಕೆ ನಿರ್ಮಾಣ ಆಗಿದೆ. ನೌಕೆಯ ನಿರ್ಮಾಣ ಪ್ರಗತಿ ಪರಿಶೀಲನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷ ಜೂನ್ನಲ್ಲಿ ಭೇಟಿ ನೀಡಿದ್ದರು.
ಸಾಮರ್ಥ್ಯ
ಮಿಗ್-19 ಫೈಟರ್ ವಿಮಾನ, ಕಾಮೊವ್-31 ಏರ್ ಅರ್ಲಿ ವಾರ್ನಿಂಗ್ ಹೆಲಿಕಾಪ್ಟರ್ಗಳು, ಎಂಎಚ್-60 ಬಹುಪಾತ್ರದ ಹೆಲಿಕಾಪ್ಟರ್, ದೇಶೀಯ ನಿರ್ವಿುತ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ಗಳನ್ನು ಈ ನೌಕೆ ನಿರ್ವಹಿಸಲಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಭಾರತದ ಸಮರ ನೌಕೆ
ಚೀನಾದ ಆಟಾಟೋಪವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ದಕ್ಷಿಣ ಚೀನಾ ಸಮುದ್ರಕ್ಕೆ ಈ ತಿಂಗಳು ನೌಕಾ ಸೇನೆಯ ಕಾರ್ಯ ಪಡೆಯೊಂದನ್ನು ಕಳಿಸಲು ಭಾರತ ನಿರ್ಧರಿಸಿದೆ. ಮಿತ್ರ ದೇಶಗಳೊಂದಿಗೆ ಭದ್ರತಾ ಬಾಂಧವ್ಯವನ್ನು ವಿಸ್ತರಿಸಲು ಸಮರ ನೌಕೆ ಕಳಿಸಲಾಗುತ್ತಿದೆಯಾದರೂ ಈ ವಲಯದಲ್ಲಿ ಚೀನಾಕ್ಕೆ ಪ್ರತಿಯಾಗಿ ಮಹತ್ವದ ಪಾತ್ರ ನಿರ್ವಹಿಸುವುದು ಭಾರತದ ಯೋಜನೆಯಾಗಿದೆ.
ವಾಸ್ತವವಾಗಿ ಚೀನಾದೊಂದಿಗೆ ವೈರತ್ವ ಕಟ್ಟಿಕೊಳ್ಳಲು ಭಾರತಕ್ಕೆ ಮನಸ್ಸಿಲ್ಲ. ಆದರೆ, ಕಳೆದ ವರ್ಷ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಕಾಳಗ ನಡೆದಾಗಿನಿಂದ ಭಾರತದ ನಿಲುವು ಬದಲಾಗಿದೆ. ಅಂದಿನಿಂದ ಚೀನಾಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವಾಗಿ ಭಾರತ ಅಮೆರಿಕಕ್ಕೆ ನಿಕಟವಾಗಿದೆ.
ನಾಲ್ಕು ನೌಕೆಗಳು: ಆಗ್ನೇಯ ಏಷ್ಯಾ, ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಶಾಂತಸಾಗರಕ್ಕೆ ಎರಡು ತಿಂಗಳ ಅವಧಿಗೆ ನಾಲ್ಕು ಯುದ್ಧ ನೌಕೆಗಳನ್ನು ಕಳಿಸಲಾಗುತ್ತದೆ. ಆ ಪೈಕಿ ತಲಾ ಒಂದು ನಿರ್ದೇಶಿತ ಕ್ಷಿಪಣಿ ನಾಶಕ ಹಾಗೂ ಮಿಸೈಲ್ ಫ್ರಿಗೇಟ್ ಇರುತ್ತದೆ ಎಂದು ನೌಕಾ ಪಡೆ ಹೇಳಿಕೆ ತಿಳಿಸಿದೆ.