

41 ವರ್ಷಗಳ ಹಿರಿಯ: ಭಾರತದ ನೌಕಾಪಡೆಯಲ್ಲಿ ರಜಪೂತ್ ವರ್ಗಕ್ಕೆ ತನ್ನದೇ ಆದ ಪ್ರಾಮುಖ್ಯ, ಗೌರವ ವಿದೆ. ಇದೇ ಸರಣಿಗೆ ಸೇರಿದ ಐಎನ್ಎಸ್ ರಜಪೂತ್ ಕ್ಷಿಪಣಿ ಧ್ವಂಸಕ ಹಾಗೂ ಪ್ರಮುಖ ಹಡಗೆಂದೇ 4 ದಶಕಗಳಿಂದ ಖ್ಯಾತಿ ಪಡೆದಿತ್ತು. 1980ರ ಮೇ 4ರಂದು ಕಾರ್ಯಾರಂಭ ಮಾಡಿದ್ದ ರಜಪೂತ್ನ ಮೊದಲ ಕಮಾಂಡಿಂಗ್ ಆಫೀಸರ್ ಗುಲಾಬ್ ಮೋಹನ್ಲಾಲ್ ಹಿರಂದಾನಿ. ಐಎನ್ಎಸ್ ರಜಪೂತ್ ಹಡಗನ್ನು ನಿಕೋಲೇವ್ ಶಿಪ್ಯಾರ್ಡ್(ಇಂದಿನ ಉಕ್ರೇನ್)ನಲ್ಲಿ ನಿರ್ವಿುಸಲಾಗಿತ್ತು. ಇದರ ಮೂಲ ಹೆಸರು ನದೇಝುನಿ(ನಿರೀಕ್ಷೆ).
ಬ್ರಹ್ಮೋಸ್ ಕ್ಷಿಪಣಿಗೆ ಆಧಾರ: ಬ್ರಹ್ಮೋಸ್ ಕ್ಷಿಪಣಿ ಕೂಡ ಭಾರತೀಯ ನೌಕಾಪಡೆಯ ಪ್ರಬಲ ಅಸ್ತ್ರ. ಈ ಕ್ಷಿಪಣಿ ಪ್ರಯೋಗಕ್ಕೆ ಸದಾ ವೇದಿಕೆ ಆಗುತ್ತಿದ್ದ ಹಿರಿಮೆಯೂ ಐಎನ್ಎಸ್ ರಜಪೂತ್ಗಿತ್ತು. 2007ರ ಮಾರ್ಚ್ನಲ್ಲಿ ಇದೇ ರಜಪೂತ್ನಿಂದ ಪೃಥ್ವಿ-3 ಕ್ಷಿಪಣಿ ಉಡಾವಣೆ ಮಾಡಲಾಗಿತ್ತು. 2005ರಲ್ಲಿ ಧನುಷ್ ಕ್ಷಿಪಣಿಯನ್ನು ರಜಪೂತ್ ಹಡಗಿನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.
ಪ್ರಮುಖ ಆಪರೇಷನ್: ರಜಪೂತ್ ಹಡಗನ್ನು ನೌಕಾಪಡೆಯ ಹಲವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಶ್ರೀಲಂಕಾದ ಆಪರೇಷನ್ ಅಮನ್, ಆಪರೇಷನ್ ಪವಾನ್, ಮಾಲ್ಡೀವ್ಸ್ನಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನಡೆಸಲಾದ ಆಪರೇಷನ್ ಕಾಕ್ಟಸ್, ಲಕ್ಷದ್ವೀಪದಲ್ಲಿ ನಡೆದ ಆಪರೇಷನ್ ಕ್ರೌನ್ ನೆಸ್ಟ್ನಲ್ಲಿ ರಜಪೂತ್ ಸೇವೆ, ಕಾರ್ಯವನ್ನು ಭಾರತ ಮರೆಯುವ ಹಾಗಿಲ್ಲ. 41 ವರ್ಷಗಳ ಸುದೀರ್ಘ ಸೇವೆಯಲ್ಲಿ ಈ ಹಡಗು 31 ಕಮಾಂಡಿಂಗ್ ಆಫೀಸರ್ಸ್ಗಳನ್ನು ಕಂಡಿದೆ.
ಸೇನೆಯ ಅಂಗಸಂಸ್ಥೆ: ಐಎನ್ಎಸ್ ರಜಪೂತ್ ಭಾರತೀಯ ಸೇನೆ ರೆಜಿಮೆಂಟ್ನ ಮೊದಲ ಅಂಗಸಂಸ್ಥೆಯ ಸ್ಥಾನಪಡೆದ ದೇಶದ ಮೊದಲ ಹಡಗೆಂಬ ಹೆಗ್ಗಳಿಕೆ ಹೊಂದಿದೆ.