ಅಂತರಂಗದ ವಿಜಯದಶಮಿ

Georgia (2)
Published on

| ಸಿದ್ಧಶಿಶು ಡಾ. ಶ್ರದ್ಧಾನಂದ ಸ್ವಾಮೀಜಿ

ಶಿವಾನಂದ ಮಠ ಸದಲಗಾ

ಹಬ್ಬಗಳು ಸಂತಸ, ಸಹಬಾಳ್ವೆ, ಶಾಂತಿಯ ಪ್ರತೀಕ. ವಿಜಯದಶಮಿಯು ಅಂತರಂಗ ಹಾಗೂ ಬಹಿರಂಗದ ವಿಜಯವನ್ನು ಸಾರುವ ಹಬ್ಬ. ರಾಮನು ರಾವಣನನ್ನು ಸೋಲಿಸಿದ್ದು, ಪಾಂಡವರು ಕೌರವರನ್ನು ಸೋಲಿಸಿದ್ದು ಒಂದು ರೀತಿ ಬಹಿರಂಗದ ವಿಜಯ ಎಂದು ಹೇಳಬಹುದು. ಬಹಿರಂಗದಲ್ಲಿರುವ ವೈರಿಗಳನ್ನು ಸೋಲಿಸುವುದು ಅಷ್ಟೇನು ಕಷ್ಟವಲ್ಲ. ಏಕೆಂದರೆ ಬಹಿರಂಗದ ವೈರಿಗಳು ಕಣ್ಣಿಗೆ ಕಾಣಿಸುತ್ತಾರೆ, ಕೈಗೆ ಸಿಗುತ್ತಾರೆ. ಆದರೆ ಅಂತರಂಗದ ವೈರಿಗಳು ಯಾರ ಕಣ್ಣಿಗೂ ಕಾಣುವುದಿಲ್ಲ, ಯಾರ ಕೈಗೂ ಸಿಗುವುದಿಲ್ಲ. ಕಾಮ ಕ್ರೋಧಾದಿ ಅರಿಷಡ್ವರ್ಗ, ಅಷ್ಟಮದ ಮೊದಲಾದವು ನಮ್ಮ ಅಂತರಂಗದ ವೈರಿಗಳು. ಇವು ನಮ್ಮೊಳಗೆ ಇದ್ದು ನಮ್ಮನ್ನು ನಿರಂತರವಾಗಿ ಕಾಡುತ್ತವೆ. ಹೆಜ್ಜೆ ಹೆಜ್ಜೆಗೂ ನಮ್ಮನ್ನು ಸೋಲಿಸುತ್ತಿರುತ್ತವೆ. ಬಹಿರಂಗದಲ್ಲಿ ನಾವು ಎಷ್ಟೇ ವಿಜಯ ಗಳಿಸಿದ್ದರೂ ಅಂತರಂಗದಲ್ಲಿ ನಾವು ಸೋತಿದ್ದರೆ ನಮ್ಮ ಬಹಿರಂಗದ ವಿಜಯಕ್ಕೆ ಕಾಸಿನ ಬೆಲೆ ಇಲ್ಲ.

ನಾವು ಸಾಕಷ್ಟು ವಿದ್ಯಾವಂತರಾಗಿರುತ್ತೇವೆ, ಸಿರಿವಂತರಾಗಿರುತ್ತೇವೆ, ಶಕ್ತಿವಂತರಾಗಿರುತ್ತೇವೆ. ಆದರೆ ನಮ್ಮಲ್ಲಿ ದಯೆ, ಕರುಣೆ, ಪ್ರೀತಿ-ವಿಶ್ವಾಸ, ಶಾಂತಿ, ಸಮಾಧಾನ ಇಲ್ಲದಿದ್ದರೆ; ಬರಿ ಕಾಮ ಕ್ರೋಧಾದಿಗಳು ತುಂಬಿಕೊಂಡಿದ್ದರೆ, ನಮ್ಮ ಸಿರಿ-ಸಂಪದ, ವಿದ್ಯೆ-ಬುದ್ಧಿಗೇನು ಬೆಲೆ? ದೇಶವನ್ನಾಳುವ ಲೋಕನಾಯಕರೇ ಭ್ರಷ್ಟಾಚಾರಿಗಳಾದರೆ, ವ್ಯಸನಿಕರಾದರೆ, ಅವರನ್ನು ಲೋಕನಾಯಕರು, ಮಂತ್ರಿ ಮಹೋದಯರು, ರಾಜ ಮಹಾರಾಜರೆಂದು ಕರೆಯುವುದಾದರೂ ಹೇಗೆ?

ಪುರಾತನ ಕಾಲದ ಒಂದು ಕಥೆ; ಓರ್ವ ಮಹಾರಾಜನು ತನ್ನ ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡಿದ್ದ. ಆಗ ಆತನ ಪ್ರಜೆಗಳು, ಮಂತ್ರಿ-ಮಹೋದಯರು ಆ ರಾಜನನ್ನು ಸರ್ವಜಿತ ಮಹಾರಾಜನೆಂದು ಕರೆಯತೊಡಗಿದರು. ಆದರೆ, ಮಹಾರಾಜನ ತಾಯಿ ಮಾತ್ರ ಎಂದೂ ಮಗನಿಗೆ ಸರ್ವಜಿತನೆಂದು ಕರೆಯಲಿಲ್ಲ. ಒಂದು ದಿನ ಮಹಾರಾಜನೇ ಸ್ವತಃ ತನ್ನ ತಾಯಿಯನ್ನು ಕೇಳಿದ, ‘ಅಮ್ಮಾ, ಎಲ್ಲರೂ ನನ್ನನ್ನು ಸರ್ವಜಿತನೆಂದು ಕರೆಯುತ್ತಾರೆ. ಆದರೆ ನೀವು ಮಾತ್ರ ನನ್ನನ್ನು ಎಂದೂ ಸರ್ವಜಿತನೆಂದು ಕರೆಯಲಿಲ್ಲವೇಕೆ?’ ಆಗ ಮಹಾರಾಜನ ತಾಯಿ ಹೇಳಿದಳು, ‘ಮಗು, ನೀನು ನಿನ್ನ ನೆರೆ ಹೊರೆಯ ರಾಜರನ್ನೆಲ್ಲ ಗೆದ್ದಿರುವೆ. ಆದರೆ ನಿನ್ನನ್ನು ನೀನು ಗೆದ್ದಿಲ್ಲ. ಆದ್ದರಿಂದ ನಾನು ನಿನ್ನನ್ನು ಸರ್ವಜಿತ ಮಹಾರಾಜ ಎಂದು ಕರೆಯಲಾರೆ.’ ಮಹಾರಾಜ ಕೇಳಿದ, ‘ಹಾಗೆಂದರೇನು ಅಮ್ಮಾ ತಿಳಿಸಿ ಹೇಳಿರಿ.’ ತಾಯಿ ಹೇಳಿದರು, ‘ನೀನು ವ್ಯಸನಾಧೀನನಾಗಿರುವಿ, ಸ್ತ್ರೀಲೋಲುಪನಾಗಿರುವಿ, ಮಾಂಸಾಹಾರ, ಮದ್ಯಪಾನ ಮಾಡುತ್ತಿರುವಿ.

ಆದ್ದರಿಂದ ನಾನು ನಿನ್ನನ್ನು ‘ಸರ್ವಜಿತ’ ಎನ್ನಲಾರೆ’ ಯಾವಾಗ ನೀನು ಎಲ್ಲ ವ್ಯಸನಗಳನ್ನು ಬಿಟ್ಟು ನಿರ್ವ್ಯಸನಿಯಾಗುವಿಯೋ ಅಂದೇ; ನಾನು ನಿನ್ನನ್ನು ಸರ್ವಜಿತ ಮಹಾರಾಜ ಎಂದು ಕರೆಯುತ್ತೇನೆ.’ ತಾಯಿಯ ಮಾತಿನಂತೆ ಮಹಾರಾಜನು ಆಶ್ರಮ ವಾಸಿಯಾಗಿ ಕ್ರಮೇಣ ಎಲ್ಲ ವ್ಯಸನಗಳನ್ನು ತೊರೆದು ನಿರ್ವ್ಯಸನಿಯಾದ. ಅದೇ ದಿನ ತಾಯಿಯು ಮಗನನ್ನು ಮನದುಂಬಿ ‘ಸರ್ವಜಿತ ಮಹಾರಾಜರಿಗೆ ಜಯವಾಗಲಿ’ ಎಂದು ಹಷೋದ್ಗಾರ ಮಾಡಿದಳು. ಹೀಗೆ ನಮ್ಮೊಳಗಿರುವ ಕಾಮ-ಕ್ರೋಧಾದಿ ರಾಕ್ಷಸರನ್ನು ಗೆಲ್ಲುವುದೇ ನಿಜವಾದ ವಿಜಯದಶಮಿ. ಅಂತರಂಗದಲ್ಲಿ ಇಂಥ ವಿಜಯದಶಮಿಯನ್ನು ನಾವೆಲ್ಲ ಆಚರಿಸಿದರೆ ನಾವು ಸರ್ವಜಿತರಾಗಿ ಸರ್ವಸುಖಿಗಳಾಗುತ್ತವೆ. ಆಗ ಭಾರತ ದೇಶವು ವಿಶ್ವಗುರುವಾಗಿ ವಿಶ್ವಶಾಂತಿ ತರುವುದರಲ್ಲಿ ಸಂದೇಹವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net