ಅಂತಃಶಕ್ತಿಗೆ ಉತ್ಸಾಹಬೇಕು

2-67b21eabd231c
Published on
ಈ ವಿಶ್ವ ಅಂದರೆ ಆರಾಮದಿಂದ ಇರಲು ಬಂದ ವಿಶ್ರಾಂತಿಧಾಮವಲ್ಲ, ಪರಿಶ್ರಮದ ಕರ್ಮ ಸ್ಥಳ. ಯಾವುದೇ ಒಂದು ಫಲ ಪಡೆಯಬೇಕಾದರೆ ನಾವು ಸತತ ಪ್ರಯತ್ನಿಸಬೇಕು. ನಮ್ಮಲ್ಲಿರುವ ಕ್ರಿಯಾಶಕ್ತಿಯನ್ನು ಬಳಸಬೇಕು. ಆಲಸ್ಯ ಬರಬಾರದು. ಆಲಸ್ಯವು ಮನುಷ್ಯನೊಳಗಿರುವ ಶತ್ರುವು. ಹಾಗೇ ಉದ್ಯೋಗಕ್ಕೆ ಸಮನಾದ ಬಂಧುವಿಲ್ಲ, ಉದ್ಯೋಗ ಮಾಡುತ್ತಿರುವವನಿಗೆ ಬಡತನವೆಂಬುದಿಲ್ಲ ಎಂದು ಸುಭಾಷಿತಕಾರರು ಹೇಳಿದ್ದಾರೆ. ಭೂಮಿಯಲ್ಲಿ ಬಿತ್ತಿದ ಬೀಜ ಕ್ರಿಯಾಶೀಲಗೊಂಡು ಸಸಿಯಾಗಿ, ಮರವಾಗಿ, ಹೂವಾಗಿ, ಮೊಗ್ಗಾಗಿ ಫಲಕೊಡುತ್ತದೆ. ಹಾಗೇ ಮನುಷ್ಯ ಸತತ ಕ್ರಿಯಾಶೀಲನಾದಾಗ ಬದುಕು ಸುಂದರಗೊಳ್ಳುತ್ತದೆ.

ಉದಾ: ನೆಪೋಲಿಯನ್​ನನ್ನು ರಾಜ ಸೆರೆಮನೆಯಲಿಟ್ಟು ಮರಣ ದಂಡನೆ ವಿಧಿಸಿದ್ದ. ನೆಪೋಲಿಯನ್ನನ ಪರವಾಗಿ ಮಂತ್ರಿಯು ವಾದಿಸಿ ಇವನನ್ನು ಸೆರೆಯಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ ತಥಾಸ್ತು ಎಂದಮಹಾರಾಜ. ಆ ಕ್ಷಣವೇ ಮಂತ್ರಿಯು ಸೆರೆಮನೆಗೆ ಸಿಹಿ ಸುದ್ದಿ ಮುಟ್ಟಿಸಲು ಓಡಿದ. ಏಕೆಂದರೆ ಮಾರನೇ ದಿನವೇ ನೆಪೋಲಿಯನ್​ನನ್ನು ಗಲ್ಲಿಗೇರಿಸುವ ನಿರ್ಧಾರವಾಗಿತ್ತು. ಮಂತ್ರಿಯು ಅಲ್ಲಿಗೆ ಹೋದಾಗ ಸೆರೆಮನೆಯ ಕತ್ತಲಲ್ಲಿ ದೀಪವೊಂದನ್ನು ಹಿಡಿದು ನೆಪೋಲಿಯನ್ ಯುರೋಪಿನ ಭೂಪಟವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ.

ಮಂತ್ರಿ ಕೇಳಿದ: ಏನು ಹುಡುಕಾಡುತ್ತೀರಿ?. ಆಗ ನೆಪೋಲಿಯನ್, ‘ಮುಂದೆ ನಾನು ಯುರೋಪಿನ ಚಕ್ರವರ್ತಿಯಾದರೆ ಯಾವ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕೆಂದು ತೀರ್ವನಿಸುತ್ತಿದ್ದೇನೆ’ ಎಂದು ಉತ್ತರಿಸಿದ.

ಮಂತ್ರಿಹೇಳಿದ: ನಾಳೆ ಬೆಳಿಗ್ಗೆ ನಿಮಗೆ ಗಲ್ಲುಶಿಕ್ಷೆ ಇದೆ ನೆನಪಿದೆಯೇ? ಎಂದ. ‘ಗೊತ್ತು!’ ಭೂಪಟದಲ್ಲಿ ಮುಖವಿಟ್ಟ ನೆಪೋಲಿಯನ್ ಸಹಜವಾಗಿಯೇ ಮುಖಮೇಲೆತ್ತದೇ ಉತ್ತರಿಸಿದ. ‘ಆ ಶಿಕ್ಷೆಗೆ ಇನ್ನೂ ಹಲವು ಗಂಟೆಗಳು ಇವೆ, ಚಿಂತೆಯೇನೂ ಇಲ್ಲ ನಿರುತ್ಸಾಹವೂ ಇಲ್ಲ, ನನ್ನಲ್ಲಿರುವ ಕ್ರಿಯಾಶೀಲತೆ ಆಲಸ್ಯಗೊಂಡಿಲ್ಲ. ಕಾರ್ಯ ಸಂಯೋಜನೆಯಲ್ಲಿ ಮಗ್ನನಾಗಿದ್ದೇನೆ, ಮರಣ ಬಂದರೂ ಬರಲಿ ಭಯವಿಲ್ಲ.’ ಎಂದಾಗ ನೆಪೋಲಿಯನ್ ಬಗ್ಗೆ ಮಂತ್ರಿಗೆ ಮತ್ತಷ್ಟು ಅಭಿಮಾನ ಮೂಡಿತು. ಮಹಾರಾಜನಿಗೆ ತಿಳಿಸಿ ಹೇಳಲಾಗಿ ನೆಪೋಲಿಯನ್​ನನ್ನು ಕ್ಷಮಿಸಿ ಬಿಟ್ಟನು. ಮುಂದೆ ನೆಪೋಲಿಯನ್ ಫ್ರೆಂಚ್ ದೇಶದ ಚಕ್ರವರ್ತಿಯಾಗಿ ಪ್ರಜೆಗಳ ಕಲ್ಯಾಣಗೈದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net