ಸಹಜ ಪ್ರವೃತ್ತಿ ಪ್ರಯತ್ನಪೂರ್ವಕ ಪ್ರವೃತ್ತಿ

ವಿಜಯವಾಣಿ (2)
Published on

 | ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶ್ರೀ ಜಗದ್ಗುರು ರಂಭಾಪುರಿ ಪೀಠ, ಬಾಳೆಹೊನ್ನೂರು

ಮನುಷ್ಯನ ಬದುಕಿನ ಪಯಣದಲ್ಲಿ ಒಂದು ಸಹಜ ಪ್ರವೃತ್ತಿ, ಇನ್ನೊಂದು ಪ್ರಯತ್ನಪೂರ್ವಕ ಪ್ರವೃತ್ತಿ ಎಂಬುದು ಇವೆ. ಸಹಜ ಪ್ರವೃತ್ತಿ ಅಂದರೆ- ಹುಟ್ಟು ಬಾಲ್ಯ, ಯೌವ್ವನ, ವಿವಾಹ, ಮಕ್ಕಳು, ಮನೆ, ರೋಗರುಜಿನಾದಿಗಳು, ಸುಖ-ದುಃಖ, ಮುಪ್ಪು, ಮರಣ ಇತ್ಯಾದಿ. ಈ ಎಲ್ಲ ಬದಲಾವಣೆಗಳು ಸಹಜ, ಪರಿವರ್ತನೆ ಜಗದ ನಿಯಮ. ಹುಟ್ಟಿದ್ದು ಸಾಯಲೇಬೇಕು, ಕಟ್ಟಿದ್ದು ಬೀಳಲೇ ಬೇಕು, ಹಚ್ಚಿದ ದೀಪ ಆರಲೇಬೇಕು, ಗಳಿಸಿದ ಆಸ್ತಿ ಇಂದು ನನ್ನದು, ನಾಳೆ ಯಾರದೋ ಗೊತ್ತಿಲ್ಲ.

ರಾಜ ಮಹಾರಾಜರ ಸಾಮ್ರಾಜ್ಯಗಳೇ ಕರಗಿಹೋದವು, ನಮ್ಮದಾವ ಲೆಕ್ಕ? ಹತ್ತರೊಳಗೆ ಹನ್ನೊಂದಾಗಿ ಬದುಕದೇ ಬದುಕಿನಲ್ಲಿ ಪ್ರಯತ್ನ ಪೂರ್ವಕ ವಿಶಿಷ್ಟತೆ ಸಾಧಿಸಬೇಕು. ಉದಾ: ಬಾಲಗಂಗಾಧರನಾಥ ತಿಲಕರು ಅಪ್ಪಟ ಪರಿಶುದ್ಧ ಹಸ್ತರು. ನಮ್ಮ ಭಾರತದ ಮೇಲೆ ಬ್ರಿಟಿಷರ ದಬ್ಬಾಳಿಕೆ ನಡೆದಾಗ ನಮ್ಮ ಭಾರತೀಯರು ಆ ಬ್ರಿಟಿಷರಲ್ಲಿಯ 10 ಮಂದಿ ಸ್ತ್ರೀಯರನ್ನು ಕೊಂದಿದ್ದರು. ಈ ಕೃತ್ಯವನ್ನು ಸರಿ ಎಂದು ತಿಲಕರು ಪತ್ರಿಕೆಯಲ್ಲಿ ಪ್ರಕಟಿಸಿದರು.

ಏಕೆೆ? ಏಕೆಂದರೆ ಅವರ ನಿಲುವು ಏನಾಗಿತ್ತೆಂದರೆ.... ನಮ್ಮ ಭಾರತೀಯರನ್ನು ಆ ಬ್ರಿಟಿಷರು ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಕೊಂದಿದ್ದರು ಎಂಬುದನ್ನು ಗಮನಿಸಿ ಅವರು ಹಾಗೆ ಬರೆದಿದ್ದರು. ಆಗ ಅವರನ್ನು ಹುಡುಕಿ ಕೊಂಡು ಬಂದ ಬ್ರಿಟಿಷರು ಬಾಲಗಂಗಾಧರ ತಿಲಕರನ್ನು 6 ತಿಂಗಳ ಕಾಲ ಸೆರೆಮನೆಗೆ ತಳ್ಳಿದರು. ಆಗ ತಿಲಕರು ಸುಮ್ಮನೇ ಕೂಡ್ರಲಿಲ್ಲ. ಕರ್ತವ್ಯಮುಖ ರಾಗಿ ಸಾವಿರಾರು ಬಿಳಿಹಾಳೆ, ಮಸಿದೌತಿ, ಲೇಖನಿ, ಭಗವದ್ಗೀತೆ ಗ್ರಂಥ ತರಿಸಿಕೊಂಡರು. ‘ಗೀತಾರಹಸ್ಯ’ ಎಂಬ ಗ್ರಂಥವನ್ನೇ ಬರೆದರು. ಸಾವಿರಾರು ಪುಟಗಳಷ್ಟು ಬರೆದು ಗೀತೆಯ ಮೇಲೆ ತಮ್ಮ ಸ್ವಂತ ಅಭಿಪ್ರಾಯವನ್ನು ಅಭಿವ್ಯಕ್ತಿಸಿ ದರು. ಇದು ಅವರ ಪ್ರಯತ್ನ ಪೂರ್ವಕ ಪ್ರವೃತ್ತಿಗೆ ಹಿಡಿದ ಕನ್ನಡಿ.

ಹೀಗೆ ಎಷ್ಟೋ ಸಾಹಸಿಗಳು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಕಣ್ಣೆದುರು ತಂದುಕೊಂಡು ಸಾಹಸಿಗಳಾಗಬೇಕು. ಪ್ರಯತ್ನ ಪೂರ್ವಕ ಪ್ರವೃತ್ತಿಯಿಂದ ಬದುಕನ್ನುಅರ್ಥಪೂರ್ಣಗೊಳಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net