

ಶಿವಮೊಗ್ಗ: ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ರೈತ ಸಂಘ, ಸಿಐಟಿಯು ಮತ್ತಿತರ ಸಂಘಟನೆಗಳು ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದವು. ಕಾರ್ಪೋರೇಟ್ ಕಂಪನಿಗಳಿಗೆ ಸರ್ಕಾರ ಮಣೆ ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ದುಡಿಯುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಂದು ಪ್ರತಿ ವಲಯದಲ್ಲೂ ಬಹುರಾಷ್ಟ್ರೀಯ ಕಂಪನಿಗಳ ಹಿಡಿತ ಬಲಗೊಳ್ಳುತ್ತಿದೆ. ದುಡಿಯುವ ವರ್ಗದ ಜನರನ್ನು ಇದು ವಿನಾಶದ ಅಂಚಿಗೆ ಕೊಂಡೊಯ್ಯಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಮೆರಿಕದ ಜತೆ ಭಾರತ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು. ಅದರಲ್ಲೂ ಹೈನುಗಾರಿಕೆ, ತರಕಾರಿ, ಹಣ್ಣುಗಳು ಸೇರಿ ಸಂಸ್ಕರಿಸಿದ ಆಹಾರಗಳ ಆಮದು ಮಡಿಕೊಳ್ಳಬಾರದು. ಭಾರತದ ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳದ ಕಾರಣದಿಂದ ದೇಶದ ರೈತರ ಗಳಿಕೆ ಕಡಿಮೆಯಾಗುತ್ತದೆ. ಕುಲಾಂತರಿ ಬೆಳೆಗಳ ಹಾವಳಿ ಕೂಡ ಹೆಚ್ಚಾಗಿದೆ. ಇದೆಲ್ಲವೂ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶಪ್ಪ, ಸಿಐಟಿಯು ಜಿಲ್ಲಾ ಸಂಚಾಲಕ ಎಂ.ನಾರಾಯಣ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹನುಮಮ್ಮ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಪ್ರಮುಖರಾದ ಅಶೋಕ್, ಟಿ.ಎಂ. ಚಂದ್ರಪ್ಪ, ಭಾಗ್ಯಾ ರಾಘವೇಂದ್ರ, ಇ.ಬಿ.ಜಗದೀಶ್, ಕೆ. ರಾಘವೇಂದ್ರ, ಪಿ.ಶೇಖರಪ್ಪ, ಎಂ.ಮಂಜಪ್ಪ, ಜ್ಞಾನೇಶ್, ಜಿ.ಎನ್.ಪಂಚಾಕ್ಷರಿ ಇತರರಿದ್ದರು.