ಗಾಯಗೊಂಡು ಆಸ್ಪತ್ರೆಗೆ ಬಂದ ಮಂಗ

state 3
Published on

ದಾಂಡೇಲಿ: ಗಾಯಗೊಂಡ ಮಂಗವೊಂದು ಆಸ್ಪತ್ರೆ ಎದುರು ಬಂದು ಕುಳಿತು ಔಷಧ ಹಚ್ಚಿಸಿಕೊಂಡು ಹೋದ ವಿಚಿತ್ರ ಸನ್ನಿವೇಶ ನಗರದಲ್ಲಿ ಶುಕ್ರವಾರ ಕಂಡುಬಂದಿದೆ. ಜೆ.ಎನ್.ರಸ್ತೆ ಪಕ್ಕದ ಪಾಟೀಲ್ ಆಸ್ಪತ್ರೆಯ ಬಾಗಿಲಿಗೆ ಬಂದು ಕುಳಿತಿದ್ದ ಮಂಗ ಬಹಳ ಹೊತ್ತಾದರೂ ಅಲ್ಲಿಂದ ತೆರಳಲಿಲ್ಲ. ತುಸು ಮಂಕಾಗಿದ್ದ ಮಂಗನ ಕಾಲಿಗೆ ಗಾಯವಾಗಿತ್ತು. ತನಗೆ ಚಿಕಿತ್ಸೆ ನೀಡುವಂತೆ ವಿಚಿತ್ರ ರೀತಿಯಲ್ಲಿ ಸನ್ನೆ ಮಾಡಿದರೂ ಅರ್ಥವಾಗದ ಆಸ್ಪತ್ರೆ ಸಿಬ್ಬಂದಿ ಗಲಿಬಿಲಿಗೊಂಡರು.

ಆಸ್ಪತ್ರೆ ಬಿಟ್ಟು ಕದಲದ ಮಂಗ ಅಲ್ಲೇ ಕುಳಿತುಕೊಂಡಿತು. ಕೆಲ ಹೊತ್ತಿನ ಬಳಿಕ ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಂಗನ ಕಾಲಿನ ಗಾಯ ಗಮನಿಸಿ ಮುಲಾಮು ಸವರಿ ಉಪಚರಿಸಿದರು.

ಬಳಿಕ ಮಂಗ ಯಾವುದೇ ತಂಟೆ ಮಾಡದೆ ಸುಮ್ಮನೆ ತೆರಳಿತು. ಮಂಗನ ವರ್ತನೆ ಆಸ್ಪತ್ರೆ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net