ಚುಚ್ಚುಮದ್ದು ಪಡೆದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ

Crime
Published on


ಬೆಂಗಳೂರು: ಜ್ವರಕ್ಕೆ ಚುಚ್ಚುಮದ್ದು ಪಡೆದಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ನಡೆದಿದ್ದು, ಯುವಕನ ಸಾವಿಗೆ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.
ಕುಂದಾಪುರ ಮೂಲದ ಅಮರ್ ಶೆಟ್ಟಿ (೩೧) ಮೃತಪಟ್ಟವರು. ಕೆ.ಪಿ.ಅಗ್ರಹಾರದ ಭಾಗ್ಯ ಕ್ಲಿನಿಕ್‌ನ ವೈದ್ಯರ ಮತ್ತು ಸಿಬ್ಬಂದಿ ವಿರುದ್ದ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಬೈನಲ್ಲಿ ಎ.ಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಅಮರ್ ಶೆಟ್ಟಿ ಕಳೆದ ೧ ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೊಟೇಲ್ ಉದ್ಯಮ ಆರಂಭಿಸಿದ್ದರು. ಆ. ೧೩ರಂದು ಬೆಳಗ್ಗೆ ೧೦ ಗಂಟೆಗೆ ಜ್ವರವೆಂದು ಕೆ.ಪಿ.ಅಗ್ರಹಾರದಲ್ಲಿರುವ ಭಾಗ್ಯ ಕ್ಲಿನಿಕ್‌ಗೆ ಹೋಗಿದ್ದ ಅಮರ್ ಶೆಟ್ಟಿಯನ್ನು ಪರೀಕ್ಷಿಸಿದ ವೈದ್ಯರು ಇಂಜೆಕ್ಷನ್ ನೀಡಿ ಮಾತ್ರೆ ಕೊಟ್ಟು ಕಳಿಸಿದ್ದರು. ಆದರೆ ನಂತರದಲ್ಲಿ ಇಂಜೆಕ್ಷನ್ ಪಡೆದ ಜಾಗದಲ್ಲಿ ಊತವುಂಟಾಗಿ ನೋವು ಕಾಣಿಸಿಕೊಂಡಿದ್ದರಿಂದ ನಂತರ ಆ.೧೬ ರಂದು ರಾಜಾಜಿನಗರದ ಚೇತನ್ ಕ್ಲಿನಿಕ್‌ಗೆ ಕರೆದೊಯ್ದು ಪರಿಶೀಲಿಸಿದಾಗ ವೈದ್ಯರು ನೋವು ನಿವಾರಕ ಮಾತ್ರೆ ನೀಡಿ ಗ್ಲುಕೋಸ್ ಹಾಕಿ ಕಳಿಸಿದ್ದರು. ಆದರೆ ನಂತರದಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅಮರ್ ಶೆಟ್ಟಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆ.೧೮ ರಂದು ಮೃತಪಟ್ಟಿದ್ದರು.

ವೈದ್ಯರ ನಿರ್ಲಕ್ಷ್ಯದ ಆರೋಪ:
ವೈದ್ಯರಾದ ರಂಜೀತ್ ಹಾಗೂ ಸಿಬ್ಬಂದಿ ಅನುಸರಿಸಿದ ಚಿಕಿತ್ಸಾ ವಿಧಾನ, ಇಂಜೆಕ್ಷನ್ ಹಾಗೂ ಮಾತ್ರೆಗಳ ಅಡ್ಡ ಪರಿಣಾಮದಿಂದ ಅಮರ್ ಶೆಟ್ಟಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸದ್ಯರು ಆರೋಪಿಸಿದ್ದಾರೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದೆ, ಸರಿಯಾದ ಚುಚ್ಚುಮದ್ದು ಹಾಗೂ ಮಾತ್ರೆಗಳನ್ನು ನೀಡದೆ ಇರುವುದೇ ಅಮರ್ ಶೆಟ್ಟಿ ಸಾವಿಗೆ ಕಾರಣವಾಗಿದೆ ಎಂಬ ಅನುಮಾನಗಳಿವೆ ಎಂದು ಆರೋಪಿಸಿ ಮೃತರ ಸಹೋದರ ಅರವಿಂದ ಶೆಟ್ಟಿ ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಾಂಗ ವೈಫಲ್ಯ!
ಇಂಜೆಕ್ಷನ್ ಅಡ್ಡಪರಿಣಾಮದಿಂದ ಜ್ವರ ಕಡಿಮೆಯಾಗದಿದ್ದಾಗ ತಕ್ಷಣವೇ ಅಮರ್‌ಶೆಟ್ಟಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಯನ್ನು ದಾಖಲಿಸಿಕೊಂಡ ವೈದ್ಯರು ಪರೀಕ್ಷೆ ನಡೆಸಿ ಇಂಜೆಕ್ಷನ್ ಅಡ್ಡಪರಿಣಾಮದಿಂದಾಗಿ ಬಹು ಅಂಗಾಂಗ ವೈಫಲ್ಯವಾಗಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಅಮರ್‌ಶೆಟ್ಟಿ ಸಾವು ಸಂಭವಿಸಿದೆ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net