

ಬೆಂಗಳೂರು: ರಾಜಭವನದಿಂದ ಮಾಹಿತಿ ಸೋರಿಕೆ ತನಿಖೆಗೆ ನಾವು ಸಿದ್ಧ. ಅದಕ್ಕೆ ರಾಜ್ಯಪಾಲರು ಅನುಮತಿ ಕೊಡಬೇಕು. ಕೊಟ್ಟರೆ ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಭವನದಲ್ಲಿ ಮಾಹಿತಿ ಸೋರಿಕೆ ಆಗುತ್ತಿದ್ದರೆ ಅದಕ್ಕೆ ರಾಜಭವನವೇ ಹೊಣೆ. ರಾಜಭವನದ ಆವರಣದೊಳಗೆ ಯಾರಿಗೂ ಹೋಗಲು ಸಾಧ್ಯವಾಗುವುದಿಲ್ಲ. ಅತ್ಯುತ್ಕೃಷ್ಟವಾದ ಭದ್ರತಾ ವಲಯ ಎಂದು ಪರಿಗಣಿಸಿದ್ದೇವೆ. ರಾಜಭವನದಿಂದ ಅನೇಕ ಪತ್ರಗಳು ಬರುತ್ತಿವೆ. ಇದನ್ನು ತನಿಖೆ ಮಾಡಿ ಎಂದು ಪತ್ರ ಬರೆದರೆ ತನಿಖೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟರೆ ಪೊಲೀಸರು ತೆರಳಿ ರಾಜಭವನದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಯಾರಿಂದ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಪತ್ತೆ ಹಚ್ಚುತ್ತಾರೆ ಎಂದು ಹೇಳಿದರು.
ರಾಜ್ಯಪಾಲರಿಗೆ ಅಗತ್ಯ ಮಾಹಿತಿ ನೀಡಲು ರಾಜ್ಯ ಸರ್ಕಾರದ ವಿರೋಧವಿಲ್ಲ. ಆದರೆ ಸಂಪುಟದ ಗಮನಕ್ಕೆ ಬಂದು ವರದಿ ನೀಡುವುದರಿಂದ ಹೊಣೆಗಾರಿಕೆ ಹೆಚ್ಚಿರುತ್ತದೆ ಎಂದರು.
ತೆರೆಮರೆಯಲ್ಲಿ ಯಾರೋ ಪತ್ರ ಬರೆಯುವುದು, ಯಾರೋ ಮಾಹಿತಿ ಪಡೆಯುವುದು ನಡೆಯುತ್ತಿದೆ. ಇದು ಸರಿಯಲ್ಲ. ಸಂಪುಟಕ್ಕೆ ಕಡತ ಮಂಡನೆಯಾದರೆ ಯಾವುದನ್ನು ರಾಜ್ಯಪಾಲರಿಗೆ ನೀಡಬೇಕು ಅಥವಾ ತಡೆಹಿಡಿಯಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಸಂಪುಟದ ಗಮನಕ್ಕೆ ತಂದಾಗ ಮುಖ್ಯ ಕಾರ್ಯದರ್ಶಿಯವರು ಹೊಣೆಗಾರರಾಗುವುದಿಲ್ಲ. ಸರ್ಕಾರವೇ ಉತ್ತರದಾಯಿತ್ವವಾಗಿರುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ ವೈಯಕ್ತಿಕವಾದ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಅವರು ಯಾವುದೇ ಸ್ಥಾನಮಾನ ಹೊಂದಿಲ್ಲ. ಈ ಹಿಂದೆ ವಿಧಾನಸಭೆಯ ಅಧ್ಯಕ್ಷರಾಗಿದ್ದರು. ಸದ್ಯಕ್ಕೆ ಅವರು ನೀಡಿರುವ ಅಭಿಪ್ರಾಯ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ.ಕೆ.ಬಿ.ಕೋಳಿವಾಡರ ಹೇಳಿಕೆ ಹಿಂದೆ ಅನ್ಯರ ಪ್ರಭಾವ ಇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೋರಿ ಬಿಜೆಪಿಯವರು ಪ್ರತಿಭಟನೆ ನಡೆಸುವುದು ಹೊಸತೇನಲ್ಲ. ಆರಂಭದಿಂದಲೂ ಇದನ್ನೇ ಮಾಡುತ್ತಿದ್ದಾರೆ. ಈಗ ವೇಗ ಹೆಚ್ಚಿಸಿರಬಹುದು. ವಿರೋಧಪಕ್ಷಗಳಾಗಿ ಹೋರಾಟ ಮಾಡುವುದು ಅವರ ಧರ್ಮ ಎಂದು ಡಾ.ಪರಮೇಶ್ವರ ಹೇಳಿದರು.
ಅನೇಕ ಪ್ರಕರಣಗಳಲ್ಲಿ ರಾಜ್ಯಸರ್ಕಾರದ ಗಮನಕ್ಕೆ ತರದೇ ನೇರವಾಗಿ ತನಿಖೆ ಮಾಡುವುದು ಸರಿಯಲ್ಲ. ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡ ಸಮಯ ಹಾಗೂ ಸಂದರ್ಭ ಸರಿಯಿಲ್ಲದೇ ಇರಬಹುದು. ಆದರೆ ನಮ್ಮ ನಿರ್ಣಯ ಸರಿ ಇದೆ. ಇದು ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ತೆಗೆದುಕೊಂಡ ನಿರ್ಣಯವಲ್ಲ ಎಂದು ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.