ಹುಣಸೂರಲ್ಲಿ ಮೂವರಿಗೆ ಸೋಂಕು

HUN-JULY-8-1(HUNSUR GOVT HOSPITAL)
Published on

ಹುಣಸೂರು : ಪಟ್ಟಣದಲ್ಲಿ ಬುಧವಾರ ಮಹಿಳೆ ಸೇರಿ ಮೂವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೆರಿಗೆ ಮಾಡಿಸಿಕೊಂಡು ಮನೆಗೆ ತೆರಳಿದ್ದ ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯನ್ನು ಭಾಗಶಃ ಸೀಲ್‌ಡೌನ್ ಮಾಡಲಾಗಿದೆ.

ತಾಲೂಕಿನ ಹಂಚ್ಯಾ ಗ್ರಾಮದ ಮಹಿಳೆ ಶನಿವಾರ ಹೆರಿಗೆಗೆ ದಾಖಲಾಗಿದ್ದು, ಅಂದೇ ಹೆರಿಗೆಯಾಗಿತ್ತು. ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ಆಕೆ ಆಸ್ಪತ್ರೆಯಿಂದ ಮಗುವಿನೊಂದಿಗೆ ಮನೆಗೆ ತೆರಳಿದ್ದರು. ಪರೀಕ್ಷಾ ವರದಿ ಬುಧವಾರ ಬಂದಿದ್ದು, ಆಕೆಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.

8 ಸಿಬ್ಬಂದಿ, 11 ಜನ ಕುಟುಂಬದವರು ಕ್ವಾರಂಟೈನ್: ಕರ್ತವ್ಯ ನಿರ್ವಹಿಸಿದ್ದ ವೈದ್ಯರೂ ಸೇರಿ 8 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಗರ್ಭಿಣಿಗೆ ಚಿಕಿತ್ಸೆ ನೀಡಿದ ವಾರ್ಡ್ ಖಾಲಿ ಮಾಡಿಸಿ ಮೂರು ದಿನಗಳ ಕಾಲ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಅಕ್ಕಪಕ್ಕದ ಬೆಡ್‌ನಲ್ಲಿ ಇದ್ದ ಜನರ ಮೇಲೂ ನಿಗಾ ವಹಿಸಿ ತಪಾಸಣೆ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಮುಖ್ಯದ್ವಾರದ ಬಳಿಯೇ ಹೊರರೋಗಿಗಳಿಗೆ ತಪಾಸಣೆ ಮತ್ತು ಔಷಧೋಪಚಾರ ನೀಡಲಾಗುತ್ತಿದೆ. ಅತಿ ತುರ್ತು ಚಿಕಿತ್ಸೆ ಇರುವ ಪ್ರಕರಣಗಳನ್ನು ಪರಿಗಣಿಸಿ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಯಲ್ಲಿ 12 ಒಳರೋಗಿಗಳು ದಾಖಲಾಗಿದ್ದು, ಅವರೆಲ್ಲರನ್ನೂ ಅತ್ಯಂತ ಎಚ್ಚರಿಕೆ ವಹಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಆಸ್ಪತ್ರೆಯನ್ನು ಭಾಗಶಃ ಸೀಲ್‌ಡೌನ್ ಮಾಡಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸರ್ವೇಶ್‌ರಾಜ್ ಅರಸ್ ಪತ್ರಿಕೆಗೆ ಮಾಹಿತಿ ನೀಡಿದರು. ಆಕೆಯ ಮನೆಯಲ್ಲಿರುವ 11 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಒಪಿಡಿ ಬಿಲ್ ಗುತ್ತಿಗೆದಾರನಿಗೆ ಸೋಂಕು: ಆಸ್ಪತ್ರೆಯ ಒಪಿಡಿ ರಸೀದಿ ನೀಡುವ ಟೆಂಡರ್ ಪಡೆದಿರುವ ಗುತ್ತಿಗೆದಾರ 50 ಸಾವಿರ ರಸೀದಿ ಪುಸ್ತಕಗಳನ್ನು ತಂದಿದ್ದರು. ಅವರ ಗಂಟಲುದ್ರವ ಪರೀಕ್ಷೆ ವರದಿ ಬಂದಿದ್ದು ಅವರಿಗೆ ಸೋಂಕು ದೃಢಪಟ್ಟಿದೆ. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಡಿ-ಗ್ರೂಪ್ ನೌಕರರು ಮತ್ತು ಇಬ್ಬರು ಗುಮಾಸ್ತರನ್ನು ಹೋಮ್ ಕ್ವಾರಂಟೈನನಲ್ಲಿಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾಹಿತಿ ನೀಡಿದರು.

ಬಸ್ ಕಂಡಕ್ಟರ್‌ಗೆ ಸೋಂಕು: ಪಟ್ಟಣದ ನ್ಯೂ ಮಾರುತಿ ಬಡಾವಣೆಯ ನಿವಾಸಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈತ ನಾಲ್ಕು ದಿನಗಳ ಹಿಂದೆ ಪತ್ನಿಯನ್ನು ಗದಗಕ್ಕೆ ಹೋಗಿ ಬಿಟ್ಟುಬಂದಿದ್ದರು. ಆತನೊಂದಿಗೆ ಪ್ರಾಥಮಿಕ ಸಂಪರ್ಕ ಸಾಧಿಸಿದ್ದ ಇಬ್ಬರನ್ನು ಮತ್ತು ಮನೆಯ ಮಾಲೀಕರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಅಕ್ಕಪಕ್ಕದ ಮೂರು ಮನೆಗಳು ಸೇರಿ ಬೀದಿಯನ್ನು 14 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ ಎಂದು ಟಿಎಚ್‌ಒ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net