ಭಾರತದಲ್ಲಿ ಶಿಶು ಮರಣ ದರ ಇಳಿಕೆ

Untitled design (5)
Published on

ನವದೆಹಲಿ: ದೇಶದಲ್ಲಿ ಶಿಶು ಮರಣ ದರ (ಐಎಂಆರ್) ಗಮನಾರ್ಹ ಪ್ರಮಾಣದಲ್ಲಿ ತಗ್ಗಿದೆ. 2013ರ 40ರಿಂದ ದಾಖಲೆಯ 25ರ ಮಟ್ಟಕ್ಕೆ ಐಎಂಆರ್ ಕುಸಿದಿದೆ. ಇದು ಶೇ.37.5ರಷ್ಟು ಇಳಿಕೆ ಎಂದು ಭಾರತದ ಮಹಾ ನೋಂದಣಾಧಿಕಾರಿ (ರಿಜಿಸ್ಟ್ರಾರ್ ಜನರಲ್) ಪ್ರಕಟಿಸಿರುವ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ (ಎಸ್​ಆರ್​ಎಸ್) ವರದಿ ತಿಳಿಸಿದೆ. ಐಎಂಆರ್ ಸಾರ್ವಜನಿಕ ಆರೋಗ್ಯದ ಒಂದು ಪ್ರಮುಖ ಸೂಚಕವೆಂದು ಭಾವಿಸಲಾಗಿದೆ. ಯಾಕೆಂದರೆ, ಒಂದು ವರ್ಷದಲ್ಲಿ ಹುಟ್ಟುವ ಪ್ರತಿ 1,000 ಶಿಶುಗಳಲ್ಲಿ ಮೃತಪಡುವ ಮಕ್ಕಳ ಸಂಖ್ಯೆಯನ್ನು ಐಎಂಆರ್ ಎಂದು ವ್ಯಾಖ್ಯಾನಿಸಲಾಗಿದೆ. ಕಡಿಮೆ ಸಂಖ್ಯೆಯ ಮಕ್ಕಳ ಸಾವು ಉತ್ತಮ ಆರೋಗ್ಯ ಸೌಲಭ್ಯದ ಲಭ್ಯತೆಯನ್ನು ಸೂಚಿಸುತ್ತದೆ.

ನಾಟಕೀಯ ಇಳಿಕೆ: 1971ರಲ್ಲಿದ್ದ 129ರಿಂದ ಐಎಂಆರ್ ನಾಟಕೀಯವಾಗಿ ಇಳಿಮುಖವಾಗಿದೆ ಎಂದು 2023ರ ಅಂಕಿ-ಸಂಖ್ಯೆ ಗಣನೆಗೆ ತೆಗೆದುಕೊಂಡಿರುವ 2023ರ ಎಸ್​ಆರ್​ಎಸ್ ವರದಿ ಹೇಳಿದೆ. ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ಉತ್ತರಪ್ರದೇಶ 37ರೊಂದಿಗೆ ದೇಶದಲ್ಲೇ ಅತಿ ಹೆಚ್ಚಿನ ಐಎಂಆರ್ ಮಟ್ಟವನ್ನು ದಾಖಲಿಸಿವೆ ಎಂದಿದೆ. ಮಣಿಪುರದಲ್ಲಿ ಅದು 3 ಆಗಿದ್ದು ಅತಿ ಕಡಿಮೆಯಾಗಿದೆ.

ಕೇರಳದ ವಿಶೇಷ: ಕೇರಳ 21 ದೊಡ್ಡ ರಾಜ್ಯಗಳ ಪೈಕಿ ಒಂದಂಕಿ ಐಎಂಆರ್ ದಾಖಲಿಸಿರುವ ಏಕೈಕ ರಾಜ್ಯವಾಗಿದೆ. ಅಲ್ಲಿನ ಐಎಂಆರ್ ಕೇವಲ 5 ಆಗಿದ್ದು ಮಣಿಪುರದ ನಂತರ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಜನನ ದರ ಮತ್ತು ಮರಣ ದರಗಳಲ್ಲಿ ಇಳಿಕೆ ಆಗಿರುವುದನ್ನೂ ಎಸ್​ಆರ್​ಎಸ್ ವರದಿ ಎತ್ತಿ ತೋರಿಸಿದೆ. ಕಳೆದ ದಶಕದಲ್ಲಿ ಜನನ ದರ ಶೇ. 14ರಷ್ಟು ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net