ಅನುಭಾವಿಗಳದು ಸೂಳ್ನುಡಿ

1-67c494f5e339c
Published on
ಆ ಮಾತು ಈ ಮಾತು ಹೋ ಮಾತು/ ನೆರೆದು ಹೋಯಿತೆಲ್ಲಾ !/ ಭಕ್ತಿ ನೀರಲ್ಲಿ ನೆರೆದು ಜಲವ ಕೋಡಿ ಹೋಯಿತಲ್ಲಾ!/ ಸಾವನ್ನಕ್ಕರ ಸರಸವುಂಟೆ ಗುಹೇಶ್ವರಾ? -ಸಾಮಾನ್ಯರ ಮಾತಿಗೂ ಸಂತರ ಮಾತಿಗೂ ಬಹಳಷ್ಟು ವ್ಯತ್ಯಾಸವಿದೆ.

ಸಂತ-ಶರಣರು ಆಡಿದ ಮಾತುಗಳು ಜಗದ ತುಂಬೆಲ್ಲ ಜ್ಞಾನಗಂಗೆಯನ್ನು ಹರಿಯಿಸಿದವು. ಅವು ಇಂದಿಗೂ ಸ್ಮರಣೀಯ, ಅನುಕರಣೀಯ. ಅರ್ಥವಿಲ್ಲದ ಅಸಂಖ್ಯ ಮಾತುಗಳು ಜನಸಾಮಾನ್ಯರಿಂದ, ಎಚ್ಚರದಿಂದ ನಿದ್ರೆಯವರೆಗೂ ಹುಟ್ಟಿನಿಂದ ಸಾಯುವವರೆಗೂ ಮಾಯೆಯಾಗಿ ಹರಿಯುತ್ತವೆ.

ಆ ಮಾತುಗಳು ನಿರರ್ಥಕ. ಆ ಮಾತಿನ ಪರಿಣಾಮದಿಂದಾಗಿ ಇದ್ದ ಭಕ್ತಿಯೂ ನೀರಾಗಿ ಹರಿದು ಹೋಗುತ್ತಿದೆ. ಹೃದಯದಲ್ಲಿ ನಂಜು ಇಟ್ಟುಕೊಂಡು ಹೊರಗೆ ಮಧುರತೆ ತುಂಬಿಕೊಂಡ ಮಾತುಗಳಿಗೆ ಅರ್ಥವಿಲ್ಲ.ಹೃದಯದ ಕತ್ತರಿ ತುದಿನಾಲಿಗೆ ಬೆಲ್ಲಂಭೋ!/ ನಿತ್ಯ ನಿತ್ಯ ಶಿವರಾತ್ರಿಯ ಮಾಡಿಹೆನು ಏಂಭೋ!... - ಹೃದಯದಲ್ಲಿ ಕತ್ತರಿ(ನಂಜು) ಮಾತಿನಲ್ಲಿ ಮಧುರತೆ ತುಂಬಿಕೊಂಡವರು ಏನು ಆಡಿದರೂ ಹಾಡಿದರೂ ಪ್ರಯೋಜನಕ್ಕೆ ಬಾರದು.

ನಿತ್ಯ ನಿತ್ಯ ಶಿವರಾತ್ರಿ ಆಚರಿಸಿದರೂ ವ್ಯರ್ಥ. ಮಾತಿನಂತೆ ಮನಸ್ಸು ನಡೆಯಂತೆ ನುಡಿ ಇರಬೇಕಾದದ್ದು ಅವಶ್ಯ. ಮಾತಿನಂತೆ ಮನವಿಲ್ಲದವರತ್ತ ಹೊರಳಿ ನೋಡಲಾರ ಆ ಪರಮಾತ್ಮ. ಈ ನಾಮ-ರೂಪಗಳ ಕ್ರಿಯಾ ವಿಳಾಸವನ್ನೇ ವೈಭವೀಕರಿಸಿ, ಸಂಭ್ರಮದಲ್ಲಿ ಆಡುವ ಮಾತುಗಳೆಲ್ಲಾ ಬರಿಯ ಮಾತು.

ಮನಬಂದಂತೆ ತಮ್ಮಲ್ಲಿ ತಾವು ಮಾತನಾಡುವ ಜೊಳ್ಳು ಮಾತುಗಳೆಲ್ಲಾ ಜೋತಿರ್ಲಿಂಗವಾಗಬಲ್ಲವೇ? ಸ್ವರ ಪರತತ್ವವಾಗಬಲ್ಲುದೇ? ತಾಳೋಷ್ಟ್ರ ಸಂಪುಟವೆಂಬುದು ನಾದಬಿಂದು ಕಲಾತೀತ ವಾಗಬಲ್ಲದೇ? ಇಲ್ಲ, ಸತ್ಯ ಸಾಧನೆ ಇಲ್ಲದ ವರ್ಣನೆಯ ಮಾತುಗಳು, ಪರತತ್ವವಾಗಲಾರವು.

ಮನುಷ್ಯನಿಗೆ ಪಾರದರ್ಶಕ ತಲೆಯಿರಬೇಕು, ಮನೆಗೊಂದು ಒಲೆಯಿರಬೇಕು, ಮಾತಿಗೊಂದು ಬೆಲೆಯಿರ ಬೇಕು, ಯಾರದೋ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಅಳುಕಿನಿಂದಾಡುವ, ಸುಳ್ಳಿಗೆ ಸತ್ಯದ ಲೇಪನ ಮಾಡುವ, ಸತ್ಯಕ್ಕೆ ಸುಳ್ಳಿನ ಲೇಪನ ಮಾಡುವ ಮಾತುಗಳು, ನಾಚಿಕೆಯ ಮಾತುಗಳು, ಗೌರವಯುತ ಮಾತುಗಳಲ್ಲ. ಜಗತ್ತಿನ ದಾರ್ಶನಿಕರು, ಅನುಭಾವಿ ಗಳು ಆಡಿದ ಮಾತುಗಳೆಲ್ಲಾ ಸೂಳ್ನುಡಿ - ಸತ್ಯದ ನುಡಿ, ಬೆಳಕಿನ ನುಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net