ಕೈಗಾರಿಕಾ ವಸಹಾತುವಿಗೆ ಟ್ರಕ್‌ ಓಡಾಡಲು ಅನುಮತಿ ನೀಡುವಂತೆ ಒತ್ತಾಯ

13 smg 13
Published on

ಶಿವಮೊಗ್ಗ: ನಗರದ ವಿವಿಧ ಕೈಗಾರಿಕಾ ವಸಹಾತು ಮತ್ತು ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಟ್ರಕ್‌ಗಳು ಓಡಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಡಳಿತದಿಂದ ನಗರದ ವಿವಿಧೆಡೆ ಸುಗಮ ಸಂಚಾರಕ್ಕೆ ಹಲವು ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಇದರಿಂದ ವರ್ತಕರು ದಿನನಿತ್ಯದ ವ್ಯಾಪಾರ ನಡೆಸಲು ಅನಾನುಕೂಲವಾಗುತ್ತಿದೆ ಎಂದು ದೂರಿದರು.

ಸಾಗರ ರಸ್ತೆ ಆರ್‌ಎಂಸಿ ಪಕ್ಕದ ಕೈಗಾರಿಕಾ ವಸಹಾತುವಿಗೆ ಲಾರಿಗಳ ಆಗಮನ ಮತ್ತು ನಿರ್ಗಮನ ನಿಷೇಧಿಸಿರುವುದರಿಂದ ಕೈಗಾರಿಕೋದ್ಯಮಿಗಳಿಗೆ ಉತ್ಪಾದನೆ, ಕಾರ್ಮಿಕರಿಗೆ ಅನಾನುಕೂಲವಾಗಿ ನಷ್ಟ ಅನುಭವಿಸುವಂತಾಗಿದೆ. ಕೈಗಾರಿಕೆಗಳು ನಡೆಯಲು ಮತ್ತು ಅಭಿವೃದ್ಧಿಪಡಿಸಲು ಸರಕುಗಳ ಪೂರೈಕೆಗೆ ಸರಕು ವಾಹನಗಳು ಪೂರಕ ಘಟಕಗಳಿಗೆ ಸಾಗಿಸುವುದು ಅವಶ್ಯ. ಕೈಗಾರಿಕೆಯಲ್ಲಿ ತಯಾರಾದ ಸಾಮಗ್ರಿಗಳನ್ನು ಹೊರಗೆ ಕಳಿಸುವುದು ಅನಿವಾರ್ಯ. ಆದ್ದರಿಂದ ವ್ಯಾಪಾರೋದ್ಯಮ ಸುಗಮವಾಗಿ ಸಾಗಲು ಕ್ರಮ ವಹಿಸುವಂತೆ ಮನವಿ ಮಾಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಪದಾಧಿಕಾರಿಗಳಾದ ವಸಂತ ಹೋಬಳಿದಾರ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಜೆ.ಆರ್.ವಾಸುದೇವ್, ಜಿ.ವಿಜಯಕುಮಾರ್, ಜಗದೀಶ ಮಾತನವರ್, ಪ್ರದೀಪ್ ಎಲಿ, ಎಸ್.ಎಸ್.ಉದಯ್‌ಕುಮಾರ್, ಬಿ.ಗೋಪಿನಾಥ್, ಹಾಲಸ್ವಾಮಿ, ಶಿವರಾಜ್ ಉಡುಗಣಿ, ವೆಂಕಟೇಶಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net