ತೈವಾನ್​ ಸೇನೆಗೆ ದೇಸೀ ನಿರ್ಮಿತ ಜಲಾಂತರ್ಗಾಮಿ ನೌಕೆ ಸೇರ್ಪಡೆ

taiwan
Published on

ತೈಪೆ: ದೇಸಿಯವಾಗಿ ನಿರ‍್ಮಿಸಿದ ತನ್ನ ಮೊದಲ ಜಲಾಂತರ್ಗಾಮಿ ನೌಕೆಯನ್ನು ತೈವಾನ್ ಗುರುವಾರ ಅನಾವರಣಗೊಳಿಸಿತು.
ಚೀನಾದಿಂದ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ರಕ್ಷಣಾ ಕ್ಷೇತ್ರದ ಅಗತ್ಯತೆಗಳನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಈ ದ್ವೀಪ ರಾಷ್ಟ್ರಕ್ಕೆ ಇದು ಮಹತ್ವದ ಮೈಲಿಗಲ್ಲು ಎಂದು ಎನ್ನಲಾಗುತ್ತಿದೆ.

ಕಾಹ್ಸಿಯುಂಗ್ ನಗರದಲ್ಲಿ ಜಲಾಂತರ್ಗಾಮಿ ಹಡಗುಕಟ್ಟೆಯಲ್ಲಿ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ತ್ಸೈ ಇಂಗ್ ವೆನ್, ಸಮುದ್ರದಲ್ಲಿ ಶತೃಗಳನ್ನು ಸದೆ ಬಡಿಯಲು ಜಲಾಂತರ್ಗಾಮಿ ನೌಕೆಗಳ ಅಗತ್ಯತೆ ಇತ್ತು. ಇವುಗಳಿಂದ ದೇಶದ ಸಮಗ್ರತೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ. ನಮ್ಮ ನೌಕಾ ಪಡೆಗೆ ಇದು ಪ್ರಮುಖ ಸಾಧನವಾಗಿದೆ ಎಂದು ಬಣ್ಣಿಸಿದ್ದಾರೆ.

ತ್ಸೈ ೨೦೧೬ ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ರಕ್ಷಣಾ ಅಗತ್ಯತೆಗಳನ್ನು ಪೂರೈಸಲು ಮುಂದಾದರು. ಇದರ ಭಾಗವಾಗಿಯೇ ಜಲಾಂತರ್ಗಾಮಿ ನೌಕೆ ನಿರ್ಮಾಣವಾಗಿರುವುದು.

ಜಲಾಂತರ್ಗಾಮಿ ನೌಕೆಗಳು ಚೀನಾದ ಸಂಭಾವ್ಯ ಆಕ್ರಮಣವನ್ನು ತಡೆಯಲು ಸಹಕಾರಿಯಾಗುತ್ತವೆ. ಚೀನಾ ನಮ್ಮ ರಾಷ್ಟ್ರದ ಸಾರ್ವಭೌಮತೆ ಮರೆತು ತನ್ನ ಪ್ರದೇಶವೆಂದು ಹೇಳಿಕೊಳ್ಳುತ್ತಿದೆ. ಹೀಗಾಗಿ ಅಗತ್ಯ ರಕ್ಷಣಾ ಸಲಕರಣೆಗಳನ್ನು ಹೊಂದುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ತೈವಾನ್​ ರಕ್ಷಣಾ ಮುಖ್ಯಸ್ಥರು ಅಭಿಪ್ರಾಯಪಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net