ಭಾರತ-ಚೀನಾ ವಾಣಿಜ್ಯ ವಾರ್​ ಬಿಗಿ: ಅಮೆರಿಕ-ಚೀನಾ ಫೈನಾನ್ಶಿಯಲ್ ವಾರ್ ಶೀಘ್ರ?

India-America-China
Published on

ನವದೆಹಲಿ: ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳನ್ನೂ ಎದುರುಹಾಕಿಕೊಂಡಿರುವ ಚೀನಾಕ್ಕೆ ಹಲವು ಸವಾಲುಗಳು ಒಟ್ಟಾಗಿ ಎದುರಾಗತೊಡಗಿವೆ. ಭಾರತದ ಭೂಭಾಗ ಅತಿಕ್ರಮಿಸಿರುವ ಚೀನಾಕ್ಕೆ ಹಿಂದಕ್ಕೆ ಸರಿಯುವಂತೆ ಸೂಚಿಸಿರುವ ಭಾರತ ಸರ್ಕಾರ, ವಾಣಿಜ್ಯ ಸಮರದ ಸೂಚನೆ ನೀಡಿದೆ. ಆ್ಯಪ್​ಗಳ ಮೇಲೆ ನಿಷೇಧ ಹೇರಿದ ಬೆನ್ನಿಗೆ, ಶಿಕ್ಷಣ ಕ್ಷೇತ್ರದಲ್ಲೂ ಚೀನಾ ಸಂಸ್ಥೆಗಳಿಗೆ ನಿಷೇಧ ಹೇರುವ ಚಿಂತನೆ ನಡೆಸಿದೆ. ಅಲ್ಲದೆ, ಇನ್ನೂ ಅನೇಕ ಕಠಿಣ ಕ್ರಮಗಳ ಎಚ್ಚರಿಕೆಯನ್ನೂ ರವಾನಿಸಿದೆ. ಇದೇ ವೇಳೆ, ಕರೊನಾ ವೈರಸ್ ಮತ್ತು ಇತರೆ ವಿಚಾರಗಳಿಗೆ ಅಮೆರಿಕವನ್ನೂ ಎದುರು ಹಾಕಿಕೊಂಡಿರುವ ಚೀನಾ ಈಗ ಅಮೆರಿಕದ ಫೈನಾನ್ಶಿಯಲ್ ವಾರ್​ ಸವಾಲನ್ನೂ ಎದುರಿಸಬೇಕಾಗಿದೆ.

ಡಾಲರ್ ವಹಿವಾಟು ನಿರ್ಬಂಧದ ಭೀತಿಯಲ್ಲಿದೆ ಬೀಜಿಂಗ್​

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊಂಡುತನ ಪ್ರದರ್ಶಿಸುತ್ತ ಬಂದಿರುವ ಚೀನಾಕ್ಕೆ ಈಗ ಡಾಲರ್​ನಲ್ಲಿ ವಹಿವಾಟು ನಡೆಸದಂತೆ ಅಮೆರಿಕದಿಂದ ನಿಷೇಧಕ್ಕೆ ಒಳಗಾಗುವ ಭೀತಿ ಎದುರಾಗಿದೆ. ಈ ವಿಚಾರವಾಗಿ ಚೀನಾ ಶಕ್ತಿ ಕೇಂದ್ರ ಬೀಜಿಂಗ್​ ನಲ್ಲಿ ಈಗ ನಡುಕ ಶುರುವಾಗಿದೆ. ಅಮೆರಿಕದ ಡಾಲರ್ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ವಹಿವಾಟಿಗೆ ಬಳಸದಂತೆ ವಾಷಿಂಗ್ಟನ್ ನಿರ್ಬಂಧ ಹೇರುವ ಮೂಲಕ ಫೈನಾನ್ಶಿಯಲ್ ವಾರ್ ಶುರುಮಾಡುವ ಸುಳಿವು ಬೀಜಿಂಗ್ ಸಿಕ್ಕಿದೆ.

ಜಗತ್ತಿನಾದ್ಯಂತ ಬ್ಯಾಂಕುಗಳು ದ ಸೊಸೈಟಿ ಆಫ್ ವರ್ಲ್ಡ್​ ವೈಡ್​ ಇಂಟರ್ ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯೂನಿಕೇಶನ್​ (Swift) ಜಾಲವನ್ನು ತಮ್ಮ ಅಂತಾರಾಷ್ಟ್ರೀಯ ಹಣಕಾಸು ವಹಿವಾಟು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ವಿನಿಯಮಕ್ಕೆ ಬಳಸುತ್ತಿವೆ. ಇಲ್ಲಿ ನಡೆಯುವ ಅಂತಾರಾಷ್ಟ್ರೀಯ ವಹಿವಾಟುಗಳೆಲ್ಲವೂ ಅಂದರೆ ವ್ಯಾಪಾರ ಮತ್ತು ಹೂಡಿಕೆಗಳೆಲ್ಲದರಲ್ಲೂ ಯುಎಸ್ ಡಾಲರ್​ನದ್ದೇ ಪ್ರಮುಖ ಭೂಮಿಕೆ. ಅಮೆರಿಕದ ಶ್ವೇತ ಭವನ ಒಂದು ಆದೇಶ ಹೊರಡಿ ಇಂತಹ ವ್ಯಕ್ತಿ ಅಥವಾ ಸಂಸ್ಥೆ ಅಥವಾ ದೇಶದೊಂದಿಗೆ ವಹಿವಾಟು ನಿಲ್ಲಿಸಿ ಎಂಬ ಆದೇಶ ನೀಡಿದರೆ ಈ ವ್ಯವಸ್ಥೆಯನ್ನು ಬಳಸುವುದರಿಂದ ನಿಷೇಧಿತರು ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ: ಏಕಾಂಗಿಯಾದ ಚೀನಾ

ಇದೊಂದೇ ಕಾರಣಕ್ಕೆ ಈಗ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಚಿಂತೆಗೆ ಒಳಗಾಗಿದೆ. ರಾಜಕೀಯ ಚಿಂತಕರು, ಆರ್ಥಿಕ ಪರಿಣತರು ಹೀಗೆ ಘಟಾನುಘಟಿಯರೆಲ್ಲ ಬೀಜಿಂಗ್​ನಲ್ಲಿ ಮ್ಯಾರಥಾನ್ ಮೀಟಿಂಗ್ ಶುರುಮಾಡಿಕೊಂಡಿದ್ದಾರೆ. ಇವುಗಳ ನಡುವೆ, ಹಾಂಕಾಂಗ್​, ಕ್ಸಿನ್​ಜಿಯಾಂಗ್​ ಕುರಿತ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಸರ್ಕಾರದ ನಡೆಗೆ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗಿವೆ. ಆ ಎಲ್ಲ ಬಿಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂಬ ಚಿಂತೆಯೂ ಅವರನ್ನೆಲ್ಲ ಕಾಡಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಚೀನಾದ ಮಾತನ್ನು ಅಮೆರಿಕ ಕೇಳುವ ಸ್ಥಿತಿಯಲ್ಲಿ ಇಲ್ಲ. ಉಭಯ ದೇಶಗಳ ಸಂಬಂಧ ಹಳಸಿದೆ. ಡಾಲರ್ ವ್ಯವಸ್ಥೆ ಬಳಸದಂತೆ ವಾಷಿಂಗ್ಟನ್ ಚೀನಾಕ್ಕೆ ನಿರ್ಬಂಧ ಹೇರಿದರೆ ಚೀನಾದ ಬೆನ್ನೆಲುಬು ಮುರಿದಂತಾಗುತ್ತದೆ. ಅದೊಂದೇ ಅಪಾಯ. ಅದನ್ನು ನಿವಾರಿಸಿಕೊಂಡರೆ ಉಳಿದೆಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಬಹುದೆಂಬ ಅಭಿಪ್ರಾಯ ರಾಜಕೀಯ ಚಿಂತಕರ ಚಾವಡಿಯಲ್ಲಿ ಬಲವಾಗಿ ವ್ಯಕ್ತವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net