ಪಾಕ್​ನಿಂದ ಭಾರತಕ್ಕೆ ಹಣದ ಪರೋಕ್ಷ ಹರಿವು

photo-2-68adecca31083
Published on

ನವದೆಹಲಿ: ಪಾಕಿಸ್ತಾನದಿಂದ ಪರೋಕ್ಷವಾಗಿ ಬರುತ್ತಿರುವ ಹಣದ ಕುರಿತು ಹೆಚ್ಚಿನ ನಿಗಾ ಇಡುವಂತೆ ದೇಶದ ಬ್ಯಾಂಕ್​ಗಳು ಮತ್ತು ಬ್ಯಾಂಕಿಂಗೇತರ ಸಾಲದಾತ ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸೂಚಿಸಿದೆ.

ಶಸ್ತ್ರಾಸ್ತ್ರಗಳನ್ನು ಖರೀದಿಸಲು ಈ ಹಣವನ್ನು ಬಳಸ ಲಾಗುತ್ತಿದ್ದು, ಇಂತಹ ವ್ಯವಹಾರದ ಅಪಾಯಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆಯೂ ತಿಳಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಈ ಕುರಿತು ಆ. 6ರಂದು ಆರ್​ಬಿಐ ಹೊರಡಿಸಿರುವ ಸುತ್ತೋಲೆ ಮತ್ತು ಇತರ ದಾಖಲೆಗಳು ತನಗೆ ಲಭ್ಯವಾಗಿವೆ ಎಂದೂ ಸುದ್ದಿಸಂಸ್ಥೆ ತಿಳಿಸಿದೆ. ಪಾಕಿಸ್ತಾನದಿಂದ ಭಾರತಕ್ಕೆ ಹಣದ ನೇರ ಮತ್ತು ಮುಕ್ತ ಹರಿವನ್ನು ಬಹುತೇಕ ನಿಷೇಧಿಸಲಾಗಿದೆ. ಪ್ರತಿಯೊಂದು ವಹಿವಾಟಿಗೂ ಆರ್​ಬಿಐನ ಅನುಮತಿ ಬೇಕಾಗುತ್ತದೆ. ಭಾರತ-ಪಾಕ್ ನಡುವೆ ಕೆಲವು ತಿಂಗಳುಗಳ ಹಿಂದೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಥೆಗಳು ನಡೆಸಿದ ತನಿಖೆಯ ನಂತರ ಆರ್​ಬಿಐನ ಈ ಸುತ್ತೋಲೆ ಹೊರಬಿದ್ದಿದೆ.

ಶಸ್ತ್ರಾಸ್ತ್ರಗಳ ಖರೀದಿಗೆ ಅಕ್ರಮವಾಗಿ ಹಣ ಒದಗಿಸುವ ವಿಷಯದಲ್ಲಿ ಪಾಕಿಸ್ತಾನ ‘ಹೈ ರಿಸ್ಕ್’ (ಹೆಚ್ಚು ಅಪಾಯಕಾರಿ) ದೇಶ ಎಂಬುದಾಗಿ ಆರ್​ಬಿಐ ಹೆಸರಿಸಿದೆಯಾದರೂ ತನಿಖಾ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ತನ್ನ ಸುತ್ತೋಲೆಯಲ್ಲಿ ನಮೂದಿಸಿಲ್ಲ. ಆದರೆ ವಿಶ್ವಸನೀಯ ಮೂಲಗಳು ಹೇಳುವ ಪ್ರಕಾರ, ಬೇರೆ ರಾಷ್ಟ್ರಗಳ ಮೂಲಕ ಪಾಕಿಸ್ತಾನದ ಕೆಲವು ಪ್ರಜೆಗಳು ಭಾರತಕ್ಕೆ ಹಣ ಕಳುಹಿಸಿದ್ದಾರೆ. ಹಾಗಾಗಿ ಭಾರತದ ಬ್ಯಾಂಕಿಂಗ್ ಮಾರ್ಗಗಳು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಖರೀದಿಗೆ ಬಳಕೆ ಯಾಗುತ್ತಿರುವುದನ್ನು ತನಿಖಾ ಸಂಸ್ಥೆ ಪತ್ತೆ ಹಚ್ಚಿವೆ.

ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಖರೀದಿಗೆ ಅಕ್ರಮವಾಗಿ ಹಣ ವರ್ಗಾವಣೆ ಆಗುವುದನ್ನು ತಡೆಗಟ್ಟಲು ಆರ್​ಬಿಐ ಈಗಾಗಲೇ ಸಾಮಾನ್ಯ ಮಾರ್ಗಸೂಚಿಗಳನ್ನು ಹೊಂದಿದೆ. ಆದರೆ ನಿರ್ದಿಷ್ಟವಾಗಿ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸುವ ನಿರ್ದೇಶನಗಳು ತೀರಾ ಅಪರೂಪ ಎಂದು ಮೂಲಗಳು ಹೇಳಿವೆ.

ಜಾಗತಿಕ ನಿಯಮಗಳು ಮತ್ತು ನಿರ್ಬಂಧಗಳನ್ನು ಪಾಕಿಸ್ತಾನ ಯಾವ್ಯಾವ ಸಂದರ್ಭಗಳಲ್ಲಿ ಉಲ್ಲಂಘಿಸಿದೆ ಎಂಬುದನ್ನೂ ಬ್ಯಾಂಕುಗಳಿಗೆ ಬರೆದಿರುವ ಪತ್ರದಲ್ಲಿ ಆರ್​ಬಿಐ ಉಲ್ಲೇಖಿಸಿದೆ. ಕ್ಷಿಪಣಿಗಳ ಅಭಿವೃದ್ಧಿಗೆ ವಸ್ತುಗಳನ್ನು ಆಮದು ಮಾಡಿಕೊಳ್ಳುವಾಗ ಅದನ್ನು ಮೊದಲೇ ಘೊಷಣೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು ಈ ನಿಯಮವನ್ನು ಉಲ್ಲಂಘಿಸಿದೆ. ಈ ಕುರಿತ ಮಾಹಿತಿಯನ್ನು ಜಾಗತಿಕ ಹಣ ವರ್ಗಾವಣೆ ಕಾವಲು ಸಂಸ್ಥೆಯಾದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ತನ್ನ ಜೂನ್ 2025ರ ವರದಿಯಲ್ಲಿ ನೀಡಿದೆ ಎಂದು ಆರ್​ಬಿಐ ವಿವರಿಸಿದೆ.

ಈ ಎಲ್ಲ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ತಾನು ಕಳಿಸಿದ ಮನವಿಗೆ ಆರ್​ಬಿಐ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸ್ಪಂದಿಸಿಲ್ಲ ಎಂದು ರಾಯ್ಟರ್ಸ್ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net