

ನಂಜನಗೂಡು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು. ನಗರದ ಕಾಂಗ್ರೇಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
1967ರಲ್ಲಿ ಚೀನಾದೊಂದಿಗೆ ಮಿಲಿಟರಿ ಸಂಘರ್ಷ, 1971ರಲ್ಲಿ ಪೂರ್ವ ಪಾಕಿಸ್ತಾನದ ಜತೆಗೆ ಯುದ್ಧ ನಡೆಸಿ ಬಾಂಗ್ಲಾದೇಶದ ಉಗಮಕ್ಕೆ ಕಾರಣೀಭೂತರಾದದ್ದು ಅವರ ದಿಟ್ಟತನಕ್ಕೆ ಸಾಕ್ಷಿ. ದೇಶದಲ್ಲಿ ಬಡತನ ನಿರ್ಮೂಲನೆಗೊಳಿಸುವ ಸಲುವಾಗಿ ಹಸಿರು ಕ್ರಾಂತಿಯ ಜತೆಗೆ 20 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಜೀತ ಪದ್ಧತಿ ನಿರ್ಮೂಲನೆ, ಉಳುವವನೇ ಭೂಮಿ ಒಡೆಯಗಳಂತಹ ಕ್ರಾಂತಿಕಾರಿ ಕಾರ್ಯಕ್ರಮದ ಮೂಲಕ ಬಡವರಿಗೆ ನೆರವಾದವರು ಎಂದು ಬಣ್ಣಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯಕ, ಮುಖಂಡರಾದ ವಿಜಯ್ ಕುಮಾರ್, ಎಂ. ಎನ್.ಮಂಜುನಾಥ್, ಗೋವಿಂದರಾಜು,ಶ್ರೀನಿವಾಸ್‌ಮೂರ್ತಿ, ಪ್ರದೀಪ್, ಜಯಮಾಲಾ ಬೀರೇಗೌಡ, ಸೌಭಾಗ್ಯಾ ಉಪಸ್ಥಿತರಿದ್ದರು.