

ಇಸ್ಲಾಮಾಬಾದ್: ಗಡಿಯಾಚೆಯಿಂದ ನಡೆಸುತ್ತಿ ರುವ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನಕ್ಕೆ ಭಾರತ ಬುಧವಾರ ಖಡಕ್ ಸಂದೇಶ ರವಾನಿಸಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿರುವುದಕ್ಕೆ ಕಾರಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕರೆ ನೀಡಿದೆ. ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಸರ್ಕಾರಿ ಮುಖ್ಯಸ್ಥರ ಶೃಂಗಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಒಂದು ವೇಳೆ ವಿಶ್ವಾಸ ಅಥವಾ ಸಹಕಾರದಲ್ಲಿ ಕೊರತೆಯಾದರೆ, ಮೈತ್ರಿ ಭಂಗವಾಗಿ ಉತ್ತಮ ನೆರೆಹೊರೆ ಬಾಂಧವ್ಯ ಇಲ್ಲದಿದ್ದಲ್ಲಿ ಖಂಡಿತವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಗಡಿಯಾಚೆಯಿಂದ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳನ್ನು ಜೈಶಂಕರ್ ತೀವ್ರವಾಗಿ ಖಂಡಿಸಿದರು. ‘ಗಡಿಯಲ್ಲಿ ನಡೆಯುವ ಚಟುವಟಿಕೆಗಳು ಭಯೋತ್ಪಾದನೆ, ತೀವ್ರಗಾಮಿ ಮತ್ತು ಪ್ರತ್ಯೇಕತಾವಾದದ ಸ್ವರೂಪ ಹೊಂದಿದ್ದರೆ ಅವುಗಳು ಸಮಾನಾಂತರವಾಗಿ ವಾಣಿಜ್ಯ, ಇಂಧನ ಪೂರೈಕೆ, ಸಂಪರ್ಕ ಮತ್ತು ಜನರ ಪರಸ್ಪರ ವಿನಿಮಯಕ್ಕೆ ಉತ್ತೇಜನ ನೀಡುವುದಿಲ್ಲ’ ಎಂದು ಜೈಶಂಕರ್ ಪರೋಕ್ಷವಾಗಿ ಪಾಕ್ಗೆ ಟಾಂಗ್ ನೀಡಿದರು.
ಖಲಿಸ್ತಾನಿಗಳಿಗೆ ಪಾಕ್ ಬೆಂಬಲ: ಕೆನಡಾದ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ ಹಾಗೂ ಕೆನಡಾ ರಾಜಕಾರಣದಲ್ಲಿ ಪಾಕ್ ಪ್ರಭಾವ ಬೀರುತ್ತಿದೆ ಎಂದು ಕೆನಡಾದ ಭದ್ರತಾ ಗುಪ್ತಚರ ಸೇವೆಯ (ಸಿಎಸ್ಐಎಸ್) ನಿರ್ದೇಶಕಿ ವನೆಸ್ಸಾ ಲಾಯ್್ಡ ಒಪ್ಪಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಭಾರತ-ಕೆನಡಾ ಸಂಬಂಧ ಹಳಸುವುದಕ್ಕೆ ಒಂದು ವಾರದ ಮುಂಚೆಯೇ ಪಾಕ್ ಕಿತಾಪತಿಯ ಬಗ್ಗೆ ಲಾಯ್್ಡ ಈ ಟಿಪ್ಪಣಿ ಮಾಡಿದ್ದರೆನ್ನಲಾಗಿದ್ದು ಈಗ ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ದೇಶದ ವಿದೇಶಾಂಗ ಹಸ್ತಕ್ಷೇಪ ಆಯೋಗದ ಮುಂದೆ ಸೆಪ್ಟೆಂಬರ್ 27ರಂದು ಲಾಯ್್ಡ ನೀಡಿದ್ದ ಹೇಳಿಕೆ, ಸಿಖ್ ಉಗ್ರಗಾಮಿಗಳ ಚಟುವಟಿಕೆಗಳಲ್ಲಿ ಪಾಕ್ ಕೈವಾಡದ ಮೇಲೆ ಬೆಳಕು ಚೆಲ್ಲುತ್ತದೆ. ಕೆನಡಾದ ಚುನಾವಣೆ ಪ್ರಕ್ರಿಯೆಯಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಸಿಎಸ್ಐಎಸ್ ನಿರ್ದೇಶಕಿ ಆಯೋಗದ ಮುಂದೆ ಹಾಜರಾಗಿದ್ದರು.
ಧನಾತ್ಮಕ ಕೊಡುಗೆ: ಇಸ್ಲಾಮಾಬಾದ್ನಲ್ಲಿ ಬುಧವಾರ ನಡೆದ ಎಸ್ಸಿಒ ಶೃಂಗಸಭೆ ಕಲಾಪಗಳಿಗೆ ಭಾರತ ‘ಧನಾತ್ಮಕ ಮತ್ತು ರಚನಾತ್ಮಕ ಕೊಡುಗೆ ನೀಡಿದೆ’ ಹಾಗೂ ಅಲ್ಲಿ ರೂಪುಗೊಂಡ ಎಂಟು ದಾಖಲೆಪತ್ರಗಳಿಗೆ ಸಹಿ ಹಾಕಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
ರಾಷ್ಟ್ರ-ವಿರೋಧಿ ಶಕ್ತಿಗಳ ವಿರುಧ್ಧ ನಿರ್ದಯ ಧೋರಣೆಗೆ ಷಾ ಕರೆ: ರಾಷ್ಟ್ರ-ವಿರೋಧಿ ಚಟುವಟಿಕೆಗಳನ್ನು ನಿಮೂಲ ಮಾಡಲು ಎಲ್ಲ ಯುವ ಐಪಿಎಸ್ ಅಧಿಕಾರಿಗಳು ನಿರ್ದಯ ಧೋರಣೆಯಿಂದ ಕೆಲಸ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಕರೆ ನೀಡಿದ್ದಾರೆ. ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಪ್ರೊಬೆಷನರ್ಗಳೊಂದಿಗೆ ಸಂವಾದ ನಡೆಸಿದ ಷಾ, ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರನ್ನು ದಬ್ಬಾಳಿಕೆಗಳಿಂದ ಕಾಪಾಡಲು ಪೊಲೀಸರು ಉತ್ತಮ ಪ್ರಯತ್ನಗಳನ್ನು ನಡೆಸುವ ಕಾಲ ಕೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಗಡಿಯೊಳಗೆ ಅಪರಾಧಗಳನ್ನು ಕನಿಷ್ಠಗೊಳಿಸಲು ಪೊಲೀಸ್ ವ್ಯವಸ್ಥೆ ಎಚ್ಚರವಾಗಿರುವುದು ಅಗತ್ಯವೆಂದು ಷಾ ಪ್ರತಿಪಾದಿಸಿದರು.