

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ನಮೀಬಿಯಾ ತನ್ನ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ತರಬೇತಿ ಪಾಲುದಾರನಾಗಿ ಆಯ್ಕೆ ಮಾಡಿದೆ.
ಈ ಮೂಲಕ ಆಫ್ರಿಕಾದ ನೆಲದಲ್ಲಿ ಭಾರತೀಯ ಸರ್ಕಾರಿ ಜ್ಞಾನ ಸಂಸ್ಥೆಯೊಂದು ಮೀಸಲಾದ ಘಟಕವನ್ನು ಅಲ್ಲಿ ಸ್ಥಾಪಿಸುತ್ತಿದೆ.
ವಿಕಾಸಸೌಧದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್, ಸಮ್ಮುಖದಲ್ಲಿ ಜಿಟಿಟಿಸಿಯ ಡಾ. ವೈ.ಕೆ. ದಿನೇಶ್ ಕುಮಾರ್ ಮತ್ತು ಆಫ್ರಿಕಾ ಇಂಡಿಯಾ ಎಕನಾಮಿಕ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅನಿಲ್ ಶಿಂಧೆ ಸಹಯೋಗವನ್ನು ಒಪ್ಪಂದಕ್ಕೆ ಸಹಿ ಹಾಕಿದರು.
ರಾಜ್ಯದಲ್ಲಿ 20ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಜಿಟಿಟಿಸಿ, ಪ್ರತಿ ವರ್ಷ ಸಾವಿರಾರು ಜನರಿಗೆ ನಿಖರ ಉಪಕರಣ ತಯಾರಿಕೆ, ಸಿಎನ್ಸಿ ಕಾರ್ಯಾಚರಣೆ, ಮೆಕಾಟ್ರಾನಿಕ್ಸ್ಮತ್ತು ರೊಬೊಟಿಕ್ಸ್ನಲ್ಲಿ ತರಬೇತಿ ನೀಡುತ್ತಿದೆ. ಹಳೆಯ ವಿದ್ಯಾರ್ಥಿಗಳ ಜಾಲವು 5 ಲಕ್ಷಕ್ಕೂ ಹೆಚ್ಚು ಕೌಶಲ ಪೂರ್ಣ ವೃತ್ತಿಪರರನ್ನು ಹೊಂದಿದೆ. ಉದ್ಯಮದ ಅಗತ್ಯಗಳಿಗೆ ನಿಕಟವಾಗಿ ಪಠ್ಯಕ್ರಮ ರೂಪಿಸಲಾಗಿದೆ.
ಜಿಟಿಟಿಸಿಯು ಆಫ್ರಿಕಾದ ಕೈಗಾರಿಕಾ ಕೌಶಲ ಅಗತ್ಯಗಳಿಗೆ ಒಂದು ದೃಢವಾದ ಮಾದರಿಯಾಗಿದೆ. ಈ ಒಪ್ಪಂದದಿಂದ ನಮೀಬಿಯಾದಲ್ಲಿ ಕೌಶಲಪೂರ್ಣ ಪ್ರತಿಭೆಯ ಕಣಜ ನಿರ್ಮಾಣವಾಗಲಿದೆ. ಆಫ್ರಿಕಾದಾದ್ಯಂತ ಜಿಟಿಟಿಸಿ ಪದವೀಧರರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವೈ.ಕೆ ದಿನೇಶ್ ಕುಮಾರ್, ಈ ಉಪಕ್ರಮವು ರಾಜ್ಯವನ್ನು ಕೌಶಲ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ ಎಂದು ಹೇಳಿದರು.