ಕರೊನಾ ಕೇಸ್​ನಲ್ಲಿ ಭಾರತ ದಾಖಲೆ; ಪ್ರತಿದಿನ ಸರಾಸರಿ 15 ಸಾವಿರ ಪ್ರಕರಣ

NAtion- Corona
Published on

ನವದೆಹಲಿ: ಭಾರತದಲ್ಲಿ ಕರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಹೊಸ ಪ್ರಕಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಶನಿವಾರ 15,912 ಪಕರಣಗಳು ವರದಿಯಾಗಿದ್ದು, ಇವು ಈವರೆಗೆ ದಾಖಲಾದ ಅತೀ ಹೆಚ್ಚು ಪ್ರಕರಣಗಳಾಗಿವೆ. ಜೂ. 10 ರಿಂದಲೂ ಪ್ರತಿದಿನ 10 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಕೇವಲ 8 ರಿಂದ 9 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಸತತ 4 ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಕೇಸ್​ಗಳು ಏರಿಕೆಯಾಗುತ್ತಿವೆ. ಜೂನ್16 ರಂದು 11,135, 17ರಂದು 13,103, 18ರಂದು 13,827 ಹಾಗೂ 19ರಂದು 14,721 ಸೋಂಕು ಪ್ರಕರಣಗಳು ವರದಿಯಾಗಿವೆ. ಭಾರತ ಒಟ್ಟು 143 ದಿನಗಳಲ್ಲಿ 4 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ. ಫೆಬ್ರವರಿಯಿಂದ ಮೇ 19ರವರೆಗೆ ಮೊದಲ 1 ಲಕ್ಷ ಪ್ರಕರಣಗಳು ವರದಿಯಾಗಿದ್ದು, ನಂತರ ಜೂನ್ ಆರಂಭದಲ್ಲಿ 2 ಲಕ್ಷದ ಗಡಿ ದಾಟಿತ್ತು. ಬಳಿಕ ಜೂನ್ 13ರಂದು ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿತ್ತು.

ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಿಂದಲೇ ದೇಶದ ಪ್ರತಿದಿನದ ಒಟ್ಟು ಪ್ರಕರಣಗಳಲ್ಲಿ ಶೇ. 65ಕ್ಕಿಂತ ಅಧಿಕ ಕೇಸ್​ಗಳು ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಈವರೆಗೆ 1.28 ಲಕ್ಷ ಪ್ರಕರಣಗಳು ವರದಿಯಾಗಿದ್ದು, ತಮಿಳುನಾಡು ಮತ್ತು ದೆಹಲಿಯಲ್ಲಿ ತಲಾ 59 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮಿಕ್ಕಂತೆ ಗುಜರಾತ್​ನಲ್ಲಿ 27 ಸಾವಿರ, ಉತ್ತರಪ್ರದೇಶದಲ್ಲಿ 17 ಸಾವಿರ, ರಾಜಸ್ಥಾನದಲ್ಲಿ 14 ಸಾವಿರ, ಪಶ್ಚಿಮಬಂಗಾಳದಲ್ಲಿ 13 ಸಾವಿರ, ಮಧ್ಯಪ್ರದೇಶದಲ್ಲಿ 11 ಸಾವಿರ ಹಾಗೂ ಹರಿಯಾಣದಲ್ಲಿ 10 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಶೇ.55.49 ಮಂದಿ ಗುಣಮುಖ: ದೇಶದಲ್ಲಿ ಗುಣಮುಖರ ಪ್ರಮಾಣವೂ ಏರಿಕೆ ಕಾಣುತ್ತಿದೆ. ಕಳೆದ ಎರಡು ವಾರಗಳ ಹಿಂದೆ ಶೇ.50ರ ಗಡಿ ದಾಟಿದ್ದ ಗುಣಮುಖರ ಪ್ರಮಾಣ ಸದ್ಯ 55.49ಕ್ಕೆ ಏರಿಕೆಯಾಗಿದೆ. ಅಂದರೆ ಈವರೆಗೆ 2.35 ಲಕ್ಷ ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ 24 ತಾಸಿನಲ್ಲೇ 13,925 ರೋಗಿಗಳು ಚೇತರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಶನಿವಾರ ಒಂದೇ ದಿನ 7,700ಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದು, ಮಹಾರಾಷ್ಟ್ರದಲ್ಲಿ 1,300, ತಮಿಳುನಾಡಿನಲ್ಲಿ 1,000, ಪಶ್ಚಿಮ ಬಂಗಾಳ ಮತ್ತು ಗುಜರಾತ್ ತಲಾ 500, ಉತ್ತರಪ್ರದೇಶದಲ್ಲಿ 370, ಹರಿಯಾಣ, ರಾಜಸ್ಥಾನ, ಆಂಧ್ರಪ್ರದೇಶ ಹಾಗೂ ಬಿಹಾರದಲ್ಲಿ 200ಕ್ಕೂ ಹೆಚ್ಚು ರೋಗಿಗಳು ಶನಿವಾರ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳು ಹಾಗೂ ಗುಣಮುಖರ ಪ್ರಮಾಣದ ನಡುವಿನ ಅಂತರವೂ ಹೆಚ್ಚಾಗಿದೆ.

ಬ್ರೆಜಿಲ್​ನಲ್ಲಿ 50 ಸಾವಿರ ಸಾವು: ಜಾಗತಿಕವಾಗಿ ಕರೊನಾ ತೀವ್ರತೆಗೆ ಹೆಚ್ಚು ನಲುಗುತ್ತಿರುವ ಬ್ರೆಜಿಲ್​ನಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 50 ಸಾವಿರಕ್ಕೂ ಹೆಚ್ಚಾಗಿದೆ. ಶನಿವಾರ 968 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 50, 058ಕ್ಕೇರಿದೆ. ಜತೆಗೆ 31,571 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 10.70 ಲಕ್ಷಕ್ಕೆ ಏರಿಕೆಯಾಗಿದೆ. ಅದರಲ್ಲೂ ಶುಕ್ರವಾರ ಒಂದೇ ದಿನ 55 ಸಾವಿರ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ಮಾನವನ ಮೇಲೆ 2ನೇ ಹಂತದ ಪರೀಕ್ಷೆ: ಕರೊನಾ ವೈರಸ್ ತಡೆಗೆ ತಯಾರಿಸಲಾಗಿರುವ ಲಸಿಕೆಯನ್ನು ಮಾನವರ ಮೇಲೆ ಎರಡನೇ ಹಂತದ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಚೀನಾ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಐಎಂಬಿಸಿಎಎಂಎಸ್)ನ ತಜ್ಞರು ಮಾಹಿತಿ ನೀಡಿದ್ದಾರೆ. ಎರಡನೇ ಹಂತದ ಪರೀಕ್ಷೆಯನ್ನು ಶನಿವಾರ ಆರಂಭಿಸಲಾಗಿದ್ದು, ಇದು ಚೀನಾದ ವಿಜ್ಞಾನಿಗಳು ಮಾನವರ ಮೇಲೆ ಪರೀಕ್ಷಿಸುತ್ತಿರುವ 6 ಲಸಿಕೆಗಳಲ್ಲಿ ಒಂದಾಗಿದೆ. ಜಾಗತಿಕವಾಗಿ ಕರೊನಾ ಅರ್ಭಟ ಹೆಚ್ಚಳವಾಗುತ್ತಿರುವ ನಡುವೆಯೇ ವಿಶ್ವಾದ್ಯಂತ ವಿವಿಧ ದೇಶಗಳ ಸುಮಾರು ಒಂದು ಡಜನ್​ಗೂ ಅಧಿಕ ಲಸಿಕೆಗಳು ಮಾನವರ ಮೇಲಿನ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಆದರೆ ಈವರೆಗೂ ಯಾವುದೇ ಲಸಿಕೆ ಕ್ಲಿನಿಕಲ್ ಪ್ರಯೋಗದ ಮೂರನೇ ಹಂತವನ್ನು ಪ್ರವೇಶಿಸಿಲ್ಲ.

ಇಡ್ಲಿ ಮಾರಾಟಕ್ಕಿಳಿದ ಪ್ರಿನ್ಸಿಪಾಲ್!: ಕರೊನಾದಿಂದಾಗಿ ತೆಲಂಗಾಣದ ಖಮ್ಮಮ್ಲ್ಲಿನ ಖಾಸಗಿ ಶಾಲೆಯೊಂದರ ಪ್ರಿನ್ಸಿಪಾಲ್ ಹಾಗೂ ಶಿಕ್ಷಕರ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿದ್ದು, ಜೀವನೋಪಾಯಕ್ಕಾಗಿ ಸ್ವತಃ ಪ್ರಿನ್ಸಿಪಾಲ್​ರೇ ಬೀದಿಬದಿ ಇಡ್ಲಿ, ದೋಸೆ, ವಡೆ ಮಾರಾಟಕ್ಕಿಳಿದಿದ್ದಾರೆ. ಶಾಲೆ ಪ್ರಿನ್ಸಿಪಾಲ್ ಮರಗನಿ ರಾಮ್​ಬಾಬು ಪತ್ನಿಯೊಂದಿಗೆ ರಸ್ತೆ ಬದಿ ಇಡ್ಲಿ ದೋಸೆ ಅಂಗಡಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಮಾಜಶಾಸ್ತ್ರ ವಿಷಯದ ಶಿಕ್ಷಕ ಹೊಲದಲ್ಲಿ ಕೆಲಸ ಮಾಡುತ್ತಿದ್ದು, ಇಂಗ್ಲಿಷ್ ಶಿಕ್ಷಕ ಜೀವನೋಪಾಯಕ್ಕಾಗಿ ವಿಮೆ ಪಾಲಿಸಿಗಳನ್ನು ಮಾಡುವ ಕೆಲಸಕ್ಕಿಳಿದಿದ್ದಾರೆ. ಲಾಕ್​ಡೌನ್ ಹಿನ್ನೆಲೆ ಶಾಲೆಗಳು ಸತತ ನಾಲ್ಕು ತಿಂಗಳಿನಿಂದ ಬಾಗಿಲು ಮುಚ್ಚಿರುವುದರಿಂದ ಖಾಸಗಿ ಶಾಲೆಗಳ ಸಿಬ್ಬಂದಿ ವೇತನವಿಲ್ಲದೆ ಪರದಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net